ವಂದೇ ಭಾರತ್‌ ಸೇರಿ ರೈಲ್ವೆ ಯೋಜನೆಗೆ ಚಾಲನೆ

KannadaprabhaNewsNetwork |  
Published : Nov 14, 2026, 01:45 AM IST
ವಂದೇ ಭಾರತ್‌ ಗೆ ಚಾಲನೆ | Kannada Prabha

ಸಾರಾಂಶ

ಅಮೃತ್‌ ಭಾರತ್‌ ಯೋಜನೆಯಡಿ ಮಂಗಳೂರು ಸೆಂಟ್ರಲ್‌ ನಿಲ್ದಾಣ ಅಭಿವೃದ್ಧಿಗೆ 94 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದ್ದು, ಮಂಗಳೂರು ಜಂಕ್ಷನ್‌ ಕೂಡ ಅಭಿವೃದ್ಧಿಪಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು:

ಅಮೃತ್‌ ಭಾರತ್‌ ಯೋಜನೆಯಡಿ ಮಂಗಳೂರು ಸೆಂಟ್ರಲ್‌ ನಿಲ್ದಾಣ ಅಭಿವೃದ್ಧಿಗೆ 94 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದ್ದು, ಮಂಗಳೂರು ಜಂಕ್ಷನ್‌ ಕೂಡ ಅಭಿವೃದ್ಧಿಪಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ಶುಕ್ರವಾರ ಮಂಗಳೂರು ಜಂಕ್ಷನ್‌ನಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ಕೊಟ್ಟು, ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ವಿದ್ಯುದೀಕರಣ, ಸುಬ್ರಹ್ಮಣ್ಯ ರೋಡ್ ಅಮೃತ್ ಭಾರತ್ ನಿಲ್ದಾಣ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ, ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಹಲವು ಸವಾಲುಗಳ ನಡುವೆ ವಿದ್ಯುದೀಕರಣ ನೆರವೇರಿಸಿ ವಂದೇ ಭಾರತ್‌ಗೆ ಚಾಲನೆ ಕೊಟ್ಟಿರುವುದು ಸಂತಸ ತಂದಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಜನಪರ ಕಾಳಜಿ ಮತ್ತು ರೈಲ್ವೆ ಅಭಿವೃದ್ಧಿಗಾಗಿ ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಸಚಿವರು ಪ್ರಶಂಸಿಸಿದರು.

ಕೊಂಕಣ್‌ ರೈಲ್ವೆ ಶೀಘ್ರ ದ್ವಿಪಥ-ಸಚಿವ:

ಶುಕ್ರವಾರ ಉಡುಪಿಯಲ್ಲಿ ಅಕಾಶವಾಣಿಯ ನೂತನ 101.9 ಮೆಗಾಹರ್ಟ್ಜ್ ಎಫ್‌ಎಂ ಮರುಪ್ರಸಾರ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ಕೊಂಕಣ ರೈಲ್ವೆ ಪೂರ್ಣ ದ್ವಿಪಥಗೊಳಿಸುವುದು ರೈಲ್ವೆ ಇಲಾಖೆಯ ಮುಂದಿನ ಮಹತ್ವದ ಯೋಜನೆಯಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಗೆ ನೀಡಿದ್ದಾರೆ, ಸದ್ಯದಲ್ಲಿಯೇ ಈ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ಕೊಂಕಣ ರೈಲ್ವೆ ಶೀಘ್ರ ವಿಲೀನ-ಭರವಸೆ:

ಉಡುಪಿ ರೈಲ್ವೆ ನಿಲ್ದಾಣದಲ್ಲಿ ಮಾತನಾಡಿದ ಸಚಿವರು, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆ ವಿಲೀನಕ್ಕೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯ ಸರ್ಕಾರಗಳ ಪರವಾನಗಿ ಬೇಕು. ಈ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ವಿಲೀನ ಕಾರ್ಯಾರೂಪಕ್ಕೆ ಬರಲಿದೆ ಎಂದು ವೈಷ್ಣವ್ ತಿಳಿಸಿದರು.ಉಡುಪಿ ರೈಲ್ವೆ ನಿಲ್ದಾಣ ಕರಾವಳಿ ಭಾಗದ ಪ್ರಮುಖ ರೈಲ್ವೆ ನಿಲ್ದಾಣವಾಗಿದೆ, ಉಡುಪಿ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳಾಗಿವೆ, ಇದನ್ನು ಗಮನದಲ್ಲಿಟ್ಟುಕೊಂಡು ಈ ರೈಲ್ವೆ ನಿಲ್ದಾಣವನ್ನು ಸ್ಥಳೀಯ ವಾಸ್ತು ಪರಂಪರೆಗನುಗುಣವಾಗಿ ಮೇಲ್ದರ್ಜೆಗೇರಿಸಿ, ಅದರ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ ಎಂದರು.

ವಂದೇ ಭಾರತ್‌ನಲ್ಲಿ ಬೆಂಗಳೂರಿಗೆ ಯಾನ:

ಮಂಗಳೂರಿನಲ್ಲಿ ವಂದೇ ಭಾರತ್‌ ರೈಲಿಗೆ ಹಸಿರುನಿಶಾನೆ ತೋರಿ ಸಚಿವ ವೈಷ್ಣವ್‌ ಮತ್ತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಅದೇ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದರು. ಪ್ರಯಾಣದುದ್ದಕ್ಕೂ ಪ್ರತಿ ನಿಲ್ದಾಣಗಳಲ್ಲಿಯೂ ಜನರು ರೈಲಿಗೆ ಅದ್ಧೂರಿ ಚಾಲನೆ ಲಭಿಸಿತು. ಮಂಗಳೂರಿನಿಂದ ಶಾಲಾ ಮಕ್ಕಳು ಸಹ ರೈಲಿನಲ್ಲಿ ಪ್ರಯಾಣಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ