4 ವರ್ಷಗಳ ಐಟಿಇಪಿ ಪದವಿ ಶಿಕ್ಷಣ ಆರಂಭ

KannadaprabhaNewsNetwork |  
Published : Sep 11, 2026, 03:00 AM IST
ಪೊಟೋ ಸೆ.10ಎಂಡಿಎಲ್ 1. ಮುಧೋಳ ಎಸ್.ಆರ್.ಕಂಠಿ ಕಾಲೇಜಿನಲ್ಲಿ ಗುರುವಾರ ಬಿವ್ಹಿವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳ ನಗರದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020) ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್.ಸಿ.ಟಿ.ಇ) ದೇಶಾದ್ಯಂತ ಜಾರಿಗೆ ತಂದಿರುವ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಕರ ಶಿಕ್ಷಣ ಯೋಜನೆಯು ಪ್ರಸಕ್ತ ಶೈಕ್ಷಣಿಕ (2026-27) ವರ್ಷದಿಂದ ನಮ್ಮ ಮಹಾವಿದ್ಯಾಲಯದಲ್ಲಿ ಆರಂಭವಾಗಿದ್ದು, ಇದು ಉತ್ತರ ಕರ್ನಾಟಕದ ಮೊದಲ ಮಹಾವಿದ್ಯಾಲಯ ಎಂಬ ಹೆಮ್ಮೆಯ ವಿಷಯವಾಗಿದೆ ಎಂದು ಬಿ.ವ್ಹಿ.ವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ನಗರದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ-2020) ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್.ಸಿ.ಟಿ.ಇ) ದೇಶಾದ್ಯಂತ ಜಾರಿಗೆ ತಂದಿರುವ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಕರ ಶಿಕ್ಷಣ ಯೋಜನೆಯು ಪ್ರಸಕ್ತ ಶೈಕ್ಷಣಿಕ (2026-27) ವರ್ಷದಿಂದ ನಮ್ಮ ಮಹಾವಿದ್ಯಾಲಯದಲ್ಲಿ ಆರಂಭವಾಗಿದ್ದು, ಇದು ಉತ್ತರ ಕರ್ನಾಟಕದ ಮೊದಲ ಮಹಾವಿದ್ಯಾಲಯ ಎಂಬ ಹೆಮ್ಮೆಯ ವಿಷಯವಾಗಿದೆ ಎಂದು ಬಿ.ವ್ಹಿ.ವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಹೇಳಿದರು.

ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯರ ಕೊಠಡಿಯಲ್ಲಿ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಐಟಿಇಪಿ ಎಂದರೆ ದ್ವಿತೀಯ ಪಿಯುಸಿ ಮುಗಿಸಿದ ತಕ್ಷಣ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಇರುವ 4 ವರ್ಷಗಳ ಪದವಿ ಶಿಕ್ಷಣವಾಗಿದೆ. ದ್ವಿಪದವಿ ಇದರಲ್ಲಿ ಬಿ.ಎ, ಬಿ.ಎಡ್ ಮತ್ತು ಬಿ.ಎಸ್ಸಿ, ಬಿ.ಎಡ್ (ಸೆಕೆಂಡರಿ ಸ್ಟೇಜ್) ಕೋರ್ಸ್‌ಗಳು ಲಭ್ಯವಿವೆ. ಸಾಮಾನ್ಯ ಪದವಿ ಮತ್ತು ಬಿ.ಎಡ್ ಮಾಡಲು 5 ವರ್ಷ ಬೇಕಾಗುತ್ತಿತ್ತು, ಆದರೆ ಐಟಿಇಪಿ ಮೂಲಕ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿತಾಯವಾಗಲಿದೆ ಎಂದರು.

ಬಿ.ವಿ.ವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಮಾತನಾಡಿ, 2026ಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು 2030ರ ವೇಳೆಗೆ ಶಾಲೆಗಳಲ್ಲಿ ಶಿಕ್ಷಕರಾಗಲು ಈ ನಾಲ್ಕು ವರ್ಷಗಳ ಸಂಯೋಜಿತ ಬಿ.ಎಡ್ ಕನಿಷ್ಠ ಅರ್ಹತೆಯಾಗಲಿದೆ. ಎನ್.ಟಿ.ಎ ನಡೆಸುವ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ ಎನ್.ಸಿ.ಇ.ಟಿ ಕಡ್ಡಾಯವಾಗಿದೆ. ಈ ಮೆರಿಟ್ ಆಧಾರದ ಮೇಲೆಯೇ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮಾಡಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಕೋರ್ಸಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಈಗಾಗಲೇ ಒಟ್ಟು 11 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬಿಎಸ್ಸಿ, ಬಿಎಡ್ ಪದವಿಗೆ 50 ವಿದ್ಯಾರ್ಥಿಗಳು ಹಾಗೂ ಬಿ.ಎ, ಬಿಎಡ್ ಪದವಿಗೆ 50 ವಿದ್ಯಾರ್ಥಿಗಳ ಪ್ರವೇಶಾತಿಗೆ ಅನುಮತಿ ಪಡೆಯಲಾಗಿದೆ ಎಂದರು.

ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಾಕ್ಸ್‌

ನಾಳೆ ಐಟಿಇಪಿ ಕಾರ್ಯಕ್ರಮಶನಿವಾರ ಸೆ.12 ರಂದು ಬೆಳಿಗ್ಗೆ 10.30ಕ್ಕೆ ನಗರದ ಬಿಜಿಎಮ್‌ಐಟಿ ಕಾಲೇಜಿನ ಸಭಾಂಗಣದಲ್ಲಿ ಐಟಿಇಪಿ ಕಾರ್ಯಕ್ರಮವನ್ನು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ. ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮುಖ್ಯ ಅತಿಥಿ ಸ್ಥಾನವಹಿಸುವರು. ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಕಾಲೇಜುಗಳ ಪದ ನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ಸದಸ್ಯ ಸಿದ್ದರಾಮ ಮನಹಳ್ಳಿ, ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ, ಐಕ್ಯೂಎಸಿ ಸಂಯೋಜಕ ಎ.ಆರ್.ಕಡೂರ ಹಾಗೂ ಐಟಿಇಪಿ ಸಂಯೋಜಕ ಡಾ.ಎಂ.ಕೆ.ಗವಿಮಠ ಉಪಸ್ಥಿತರಿರುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸರು
ಜಲಾಶಯದಿಂದ ಸ್ಥಳೀಯ ಕೆರೆಗಳಿಗೆ ನೀರು ಬಿಡುವಂತೆ ಮನವಿ