ಯುವ ಜನರ ನೋಂದಣಿಗೆ ಜಿಪಂ ಸಿಇಒ ಸೂಚನೆ । ೧೦,೦೦೦ ಯುವ ಸಂಘಗಳನ್ನು ಸ್ಥಾಪಿಸುವ ಗುರಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತ್ ಜೋಡೋ ಯುವ ಸಂಘಗಳ ರಚನೆ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಅಗತ್ಯ ಕಾರ್ಯಕಾರಿ ಸಮಿತಿಗಳನ್ನು ರಚಿಸಲು ಅರ್ಹ ಯುವಜನರನ್ನು ಶೀಘ್ರವಾಗಿ ನೋಂದಾಯಿಸಬೇಕೆಂದು ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಸೂಚನೆ ನೀಡಿದ್ದಾರೆ.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯ ಉತ್ತೇಜಿಸುವ ಉದ್ದೇಶದಿಂದ ರಾಜ್ಯಾದ್ಯಂತ ಒಟ್ಟು ೧೦,೦೦೦ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದೆ, ಗ್ರಾಪಂ ವ್ಯಾಪ್ತಿಯಲ್ಲಿ ಸರಾಸರಿ ೬೦೦೦ ಸಂಘಗಳನ್ನು ಹಾಗೂ ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸರಾಸರಿ ೪೦೦೦ ಸಂಘಗಳನ್ನು ರಾಜ್ಯ ಸರ್ಕಾರದಿಂದ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸದರಿ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖಾಂತರ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಸಂಘಗಳಿಗೆ ಸರ್ಕಾರ ಒಂದು ಸಾವಿರ ಕೋಟಿ ರು.ಗಳನ್ನು ಮೀಸಲಿಟ್ಟಿದ್ದು, ಪ್ರತಿ ಸಂಘದ ಕಾರ್ಯಚಟುವಟಿಕೆಗಳಿಗೆ ತಲಾ ೧೦ ಲಕ್ಷ ರು. ಅನುದಾನ ನೀಡಲಾಗುತ್ತಿದೆ.ಕೋಲಾರ ಜಿಲ್ಲೆಯ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಸರಾಸರಿ ೪೦೦೦ ಜನಸಂಖ್ಯೆಗೆ ಒಂದರಂತೆ ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ತಿಳಿಸಲಾಗಿದ್ದು, ಹೆಚ್ಚಿನ ಯುವ ಜನರನ್ನು ನೊಂದಾಯಿಸಲು ವ್ಯಾಪಕವಾಗಿ ಪ್ರಚಾರ ಮಾಡಲು ಗ್ರಾಪಂಗಳಿಗೆ ಸಿಇಓ ಸೂಚಿಸಿದ್ದಾರೆ.
ಭಾರತ್ ಜೋಡೋ ಯುವ ಸಂಘದಲ್ಲಿ ೧೬ ರಿಂದ ೩೫ ವರ್ಷದೊಳಗಿನ ಯುವಕ-ಯುವತಿಯರು ನೋಂದಣಿ ಮಾಡಿಕೊಂಡು ಸದಸ್ಯರಾಗಬಹುದಾಗಿದೆ. ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ನೋಂದಣಿ ಶುಲ್ಕ ೧೦ ಆಗಿದೆ. ಪ್ರತಿ ಸಂಘದ ರಚನೆಗೆ ಕನಿಷ್ಟ ೧೦೦ ಯುವ ಸದಸ್ಯರಿರಬೇಕು. ಗರಿಷ್ಟ ಸಂಖ್ಯೆಗೆ ಮಿತಿ ಇರುವುದಿಲ್ಲ. ಈ ಸಂಘಗಳನ್ನು ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಾಯಿಸಿ, ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗುತ್ತದೆ. ಅರ್ಜಿದಾರರು ಆಯಾ ಗ್ರಾಪಂ ನಿವಾಸಿಯಾಗಿರಬೇಕು. ಒಬ್ಬ ವ್ಯಕ್ತಿಯು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅವಕಾಶವಿದೆ.
ಅರ್ಹ ಯುವಕ-ಯುವತಿಯರು ತಮ್ಮ ಮೊಬೈಲ್ ಮೂಲಕ bರಿಥಿs.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‌ಸೈಟ್‌ಗೆ ಭೇಟಿ ನೀಡಿ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೋಲಾರ ಜಿಲ್ಲೆಯ ಗರಿಷ್ಟ ಸಂಖ್ಯೆಯ ಯುವಜನರು ತಕ್ಷಣವೇ ನೋಂದಾಯಿಸಿಕೊಂಡು, ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಜಿಪಂ ಸಿಇಓ ಕರೆ ನೀಡಿದ್ದಾರೆ. ಕೋಟ್: