ಕಲ್ಯಾಣ ನಾಡಿನ ಬೇಳೆಗಳ ಮೌಲ್ಯವರ್ಧನೆಗೆ ಚಾಲನೆ

KannadaprabhaNewsNetwork |  
Published : Oct 04, 2026, 02:00 AM IST
ಫೋಟೋ- ಕಲಯಾಣ 3 | Kannada Prabha

ಸಾರಾಂಶ

ಇತ್ತೀಚೆಗಷ್ಟೇ ಮಾಲ್ಡೀವ್ಸ್‌ ದೇಶಕ್ಕೆ 1 ಲಕ್ಷ ಮೆಟ್ರಿಕ್‌ ಟನ್‌ ರಫ್ತಾಗಿ ಮೊದಲ ಬಾರಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಲಬುರಗಿಯ ತೊಗರಿ ಸಹಿತ ಹೆಸರು, ಉದ್ದು, ಕಡಲೆ ಬೇಳೆ ಕಾಳು ಬಳಸಿ ಸ್ಥಳೀಯವಾಗಿಯೇ ಅವುಗಳ ಮೌಲ್ಯವರ್ಧನೆ ಮಾಡುವ ಪ್ರಯತ್ನಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

-ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿಇತ್ತೀಚೆಗಷ್ಟೇ ಮಾಲ್ಡೀವ್ಸ್‌ ದೇಶಕ್ಕೆ 1 ಲಕ್ಷ ಮೆಟ್ರಿಕ್‌ ಟನ್‌ ರಫ್ತಾಗಿ ಮೊದಲ ಬಾರಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಲಬುರಗಿಯ ತೊಗರಿ ಸಹಿತ ಹೆಸರು, ಉದ್ದು, ಕಡಲೆ ಬೇಳೆ ಕಾಳು ಬಳಸಿ ಸ್ಥಳೀಯವಾಗಿಯೇ ಅವುಗಳ ಮೌಲ್ಯವರ್ಧನೆ ಮಾಡುವ ಪ್ರಯತ್ನಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಅದರ ಭಾಗವಾಗಿ ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್‌ನಡಿ ಬೆಂಗಳೂರಲ್ಲಿರುವ ಜೈವಿಕ ನಾವೀನ್ಯತಾ ಕೇಂದ್ರ ಕಲಬುರಗಿಯ ತೊಗರಿ, ಉದ್ದು, ಹೆಸರು, ಕಡಲೆ ಬೇಳೆಕಾಳು ಬಳಸಿ 6 ವಿಧದ ಶಕ್ತಿವರ್ಧಕ ಪೌಷ್ಟಿಕಾಂಶದ ತಿಂಡಿಗಳ ಎನರ್ಜಿ ಬಾರ್‌ ಅಭಿವೃದ್ಧಿಪಡಿಸಿ ಗಮನ ಸೆಳೆದಿದೆ. ಈ ತಿನಿಸುಗಳಲ್ಲಿ ವಿವಿಧ ಬೇಳೆಕಾಳುಗಳನ್ನು ಒಳಗೊಂಡ ಒಂದು ವಿಧ ಹಾಗೂ ಹೆಚ್ಚಿನ ಪ್ರೋಟೀನ್‌ ಹೊಂದಿರುವ ಮತ್ತೊಂದು ವಿಧ ಸೇರಿಕೊಂಡಿದೆ. 4 ವಿಧದ ಬೇಳೆಕಾಳು ಬಳಸಿ ಹುರಿದ ಕಡಲೆಕಾಯಿ, ಬೆಲ್ಲ, ಓಟ್ಸ್‌ ಮತ್ತು ಕುಂಬಳಕಾಯಿ ಬೀಜಗಳನ್ನು ಸೇರಿಸಿ ಕೃತಕ ಬಣ್ಣ, ಸುವಾಸನೆ ಅಥವಾ ರಾಸಾಯನಿಕ ಸಂರಕ್ಷಕಗಳನ್ನು ಬಳಸದೆ ಗರಿಗರಿಯಾದ ತಿನಿಸು ತಯಾರಿಸಲಾಗಿದೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಸಹಯೋಗದಲ್ಲಿರುವ ಕಲಬುರಗಿ ಬೇಳೆಕಾಳುಗಳ ಉಪಕ್ರಮದ ಅಡಿಯಲ್ಲಿ ಈ ಹೊಸ ತಿನಿಸುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಪ್ರಯತ್ನದ ಭಾಗವಾಗಿ ರಾಜ್ಯ ಸರ್ಕಾರದ ವಿದ್ಯುನ್ಮಾನ, ಐಟಿ ಮತ್ತು ಬಿಟಿ ಇಲಾಖೆಯು 2014ರಲ್ಲಿ ಸ್ಥಾಪಿಸಿರುವ ‘ಬಿಬಿಸಿ’- ಜೀವ ವಿಜ್ಞಾನದ ಪೋಷಕ ಕೇಂದ್ರದಲ್ಲಿ ಈ ನವೀನ ಪ್ರಯೋಗಗಳು ಯಶ ಕಂಡಿವೆ.ಬೇಳೆಕಾಳುಗಳಿಂದ ಶಕ್ತಿವರ್ಧಕ ತಿನಿಸುಗಳು: ಪ್ರತ್ಯೇಕ ಬೇಳೆಕಾಳುಗಳಿಂದ ತಯಾರಿಸಲಾದ ಈ ಶಕ್ತಿವರ್ಧಕ ಪೌಷ್ಟಿಕಾಂಶಯುಕ್ತ ತಿನಿಸುಗಳಲ್ಲಿ ಪ್ರತಿ 30 ಗ್ರಾಂ ಬಾರ್‌ಗೆ 4 ಗ್ರಾಂ ಪ್ರೋಟೀನ್‌ ಇದೆ. ಪ್ರತಿ ಬಾರ್‌ನಲ್ಲಿ 122 ರಿಂದ 123 ಕ್ಯಾಲೊರಿ ಮತ್ತು 1.8–2 ಗ್ರಾಂ ಆಹಾರದ ನಾರಿನಂಶ ಇದೆ. ಹೆಚ್ಚಿನ ಪ್ರೋಟೀನ್‌ ಹೊಂದಿರುವ ಎಫ್‌ಒಎಸ್‌ ಮಾದರಿಯಲ್ಲಿ ಪ್ರತಿ 30 ಗ್ರಾಂಗೆ 4.85 ಗ್ರಾಂ ಪ್ರೋಟೀನ್‌ ಇದೆ. ಈ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಹೇಳಿಕೆಗಳು ಅಂತಿಮ ಮಾನ್ಯತೆ ಪಡೆದ ಪ್ರಯೋಗಾಲಯದ ಪರೀಕ್ಷೆ ಹಾಗೂ ಎಫ್‌ಎಸ್‌ಎಸ್‌ಎಐ ಘೋಷಣೆಗೆ ಒಳಪಟ್ಟಿರುತ್ತವೆ.

ಉತ್ಪನ್ನಗಳ ಬಾಳಿಕೆ ಅವಧಿ ಮತ್ತು ಸ್ಥಿರತೆ ಪರೀಕ್ಷೆ, ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪೌಷ್ಟಿಕಾಂಶ ಪರೀಕ್ಷೆ, ಗ್ರಾಹಕರ ಸ್ವೀಕಾರಾರ್ಹತೆ ಪರೀಕ್ಷೆ, ಪ್ಯಾಕೇಜಿಂಗ್‌ ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪ್ರಕ್ರಿಯೆಗಳು ನಡೆಯಲಿವೆ. ಇದಾದ ಬಳಿಕ ಆಸಕ್ತ ‘ಎಫ್‌ಪಿಒ’ಗಳು ಮತ್ತು ಉದ್ಯಮಿಗಳಿಗೆ ಈ ಉತ್ಪನ್ನ ತಯಾರಿಕೆಯ ತಂತ್ರಜ್ಞಾನ ವರ್ಗಾಯಿಸುವ ಪ್ರಯತ್ನಗಳು ನಡೆಯಲಿವೆ.ಸ್ಥಳೀಯ ಮೌಲ್ಯವರ್ಧನೆ ಗುರಿ: ಸ್ಥಳೀಯವಾಗಿಯೇ ಮೌಲ್ಯವರ್ಧನೆ ಹೇಗೆ ಮಾಡುವುದು? ಎಂದು ಕಲಬುರಗಿಯಂತಹ ಸಮೃದ್ಧ ಬೇಳೆಕಾಳು ಬೆಳೆಯುವ ಜಿಲ್ಲೆ ಎದುರಿಸುತ್ತಿರುವ ಪ್ರಮುಖ ಸವಾಲನ್ನು ಈ ಉಪಕ್ರಮ ಪರಿಹರಿಸಲಿದೆ. ಬೇಳೆಕಾಳುಗಳನ್ನು ಹೆಚ್ಚಿನ ಮೌಲ್ಯದ, ದೀರ್ಘಕಾಲ ಸಂಗ್ರಹಿಸಬಹುದಾದ ಸಸ್ಯ ಆಧಾರಿತ ಪ್ರೋಟೀನ್‌ ಉತ್ಪನ್ನಗಳಾಗಿ ಪರಿವರ್ತಿಸಿ, ಹೆಚ್ಚಿನ ಮೌಲ್ಯ ಸೃಷ್ಟಿಸುವ ಸಾಧ್ಯತೆಗಳನ್ನು ‘ಬಿಬಿಸಿ’ ಪರಿಶೀಲಿಸುತ್ತಿದೆ.

ಕರ್ನಾಟಕದಲ್ಲಿ ಕೃಷಿ ಉತ್ಪಾದನೆ ಸಮೃದ್ಧವಾಗಿದ್ದರೂ ನಾವು ಬೆಳೆಯುವ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದೇ ನಮ್ಮ ಮುಂದಿನ ಅತಿದೊಡ್ಡ ಅವಕಾಶ. ಬೆಂಗಳೂರಿನ ನಾವೀನ್ಯತಾ ವ್ಯವಸ್ಥೆಯು ಕಲ್ಯಾಣ ಕರ್ನಾಟಕದ ಜತೆಗೆ ಕೈಜೋಡಿಸಿ ಸ್ಥಳೀಯವಾಗಿ ಬೆಳೆಯುವ ಬೇಳೆಕಾಳುಗಳನ್ನು ಹೆಚ್ಚಿನ ಮೌಲ್ಯದ ಉತ್ಪನ್ನಗಳಾಗಿ ಪರಿವರ್ತಿಸಲು ಹೇಗೆ ನೆರವಾಗಬಹುದು? ಎಂಬುದಕ್ಕೆ ಈ ಉಪಕ್ರಮ ಉತ್ತಮ ಉದಾಹರಣೆ. ಇದರ ಮೂಲಕ ರೈತರು, ರೈತ ಉತ್ಪಾದಕರ ಸಂಘಟನೆಗಳು (ಎಫ್‌ಪಿಒ) ಮತ್ತು ಸ್ಥಳೀಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬೇಳೆಕಾಳುಗಳನ್ನು ಕೇವಲ ಕಚ್ಚಾ ಕೃಷಿ ಉತ್ಪನ್ನವಾಗಿ ಪರಿಗಣಿಸುವುದಕ್ಕಿಂತ ಅದರಿಂದ ಇತರ ಯಾವುದೆಲ್ಲ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು. ಸ್ಥಳೀಯವಾಗಿ ಬೆಳೆಯುವ ಬೇಳೆಕಾಳುಗಳನ್ನು ಬಳಸಿ ಸೇವಿಸಬಹುದಾದ ವೈವಿಧ್ಯಮಯ ಪೌಷ್ಟಿಕಾಂಶದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೆಚ್ಚಿನ ಮೌಲ್ಯವರ್ಧನೆಗೆ ಇರುವ ಸಾಧ್ಯತೆ ತೋರಿಸುತ್ತಿದ್ದೇವೆ. ಈ ಮಾದರಿಯನ್ನೇ ‘ಎಫ್‌ಪಿಒ’, ಸ್ವಸಹಾಯ ಸಂಘಗಳು, ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಅಳವಡಿಸಿಕೊಳ್ಳಬಹುದು ಎಂದು ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರದ (ಬಿಬಿಸಿ) ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್‌ ಆದಿಲ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕನೂರ ಪರ ಜೋಶಿ ಪ್ರಚಾರ
ಮಹದಾಯಿ ಅನುಮತಿ, 5 ವಿಮಾನ ನಿಲ್ದಾಣಗಳಿಗೆ ಕನ್ನಡಿಗರ ಹೆಸರಿಡಿ