ಕೆಪಿಎಸ್‌ಸಿ ಕರ್ಮಕಾಂಡ ಕಂಟ್ರೋಲ್‌ಗೆ ಲವೀಶ್‌

KannadaprabhaNewsNetwork |  
Published : Aug 23, 2026, 01:15 AM IST
ಲವೀಶ್‌ ಒರಡಿಯಾ, ಐ.ಎ.ಎಸ್‌. ಅಧಿಕಾರಿ.  | Kannada Prabha

ಸಾರಾಂಶ

ದಿಟ್ಟ, ಪ್ರಾಮಾಣಿಕ ಹಾಗೂ ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಎಎಸ್‌ ಅಧಿಕಾರಿಗಳ ಪಟ್ಟಿ ತಯಾರಿಸಿರುವ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್‌ಸಿ) ಕರ್ಮಕಾಂಡಕ್ಕೆ ತಡೆ ಹಾಕಲು ಮುಂದಾದಂತಿದೆ. ಯಾದಗಿರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, 2020ರ ಬ್ಯಾಚಿನ ಐಎಎಸ್‌ ಅಧಿಕಾರಿ ಲವೀಶ್‌ ಒರಡಿಯಾ ಅವರನ್ನು ಜಂಟಿ ಪರೀಕ್ಷಾ ನಿಯಂತ್ರಕರಾಗಿ (Joint Controller Of Examination) ವರ್ಗಾಯಿಸಿ, ಆದೇಶಿಸಿದೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ದಿಟ್ಟ, ಪ್ರಾಮಾಣಿಕ ಹಾಗೂ ತಾಂತ್ರಿಕ ನೈಪುಣ್ಯತೆ ಹೊಂದಿರುವ ಐಎಎಸ್‌ ಅಧಿಕಾರಿಗಳ ಪಟ್ಟಿ ತಯಾರಿಸಿರುವ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್‌ಸಿ) ಕರ್ಮಕಾಂಡಕ್ಕೆ ತಡೆ ಹಾಕಲು ಮುಂದಾದಂತಿದೆ. ಯಾದಗಿರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, 2020ರ ಬ್ಯಾಚಿನ ಐಎಎಸ್‌ ಅಧಿಕಾರಿ ಲವೀಶ್‌ ಒರಡಿಯಾ ಅವರನ್ನು ಜಂಟಿ ಪರೀಕ್ಷಾ ನಿಯಂತ್ರಕರಾಗಿ (Joint Controller Of Examination) ವರ್ಗಾಯಿಸಿ, ಆದೇಶಿಸಿದೆ.

ಎರಡು ವರ್ಷಗಳ ಕಾಲ ಯಾದಗಿರಿ ಜಿಲ್ಲಾ ಪಂಚಾಯತ್‌ ಸಿಇಓ ಆಗಿ ಕಾರ್ಯನಿರ್ವಹಿಸಿದ್ದ ಲವೀಶ್‌, ಇಲ್ಲಿನ ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ನರೇಗಾ ಕಾಮಗಾರಿಗಳು ನೈಜ ಕೂಲಿ ಕಾರ್ಮಿಕರಿಗೆ ದೊರೆಯಲಿ ಎಂಬ ಕಾರಣಕ್ಕೆ ಹಳ್ಳಿಹಳ್ಳಿಗಳಲ್ಲಿ ನಿರಂತರ ಸುತ್ತಾಡಿ, ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸಿದವರು.

ಇಲಾಖೆಯ ವಿವಿಧೆಡೆ ಅಕ್ರಮಗಳು ಕಂಡುಬಂದಾದ, ಪ್ರಭಾವಿಗಳ ಒತ್ತಡಕ್ಕೂ ಮಣಿಯದೆ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತಿದ್ದರಲ್ಲದೆ, ಹತ್ತಾರು ಪ್ರಕರಣಗಳಲ್ಲಿ ಭ್ರಷ್ಟರ ಹುಟ್ಟಡಗಿಸಿದ್ದರು. ತಂತ್ರಜ್ಞಾನ ಪರಿಣಿತರಾದ ಇವರು, ನಕಲಿ ಹಾಜರಾತಿ ಮೂಲಕ ಸರ್ಕಾರಕ್ಕೆ ವಂಚಿಸುತ್ತಿದ್ದ 80ಕ್ಕೂ ಹೆಚ್ಚು ಪಿಡಿಓಗಳ ಅಕ್ರಮ ಪತ್ತೆ ಹಚ್ಚಿ, ಕ್ರಮ ಕೈಗೊಂಡವರು. ಲವೀಶ್‌ ಕಠಿಣ ಕ್ರಮಕ್ಕೆ ಬೆಚ್ಚಿಬಿದ್ದ ಅಕ್ರಮಕೋರರ ತಂಡ ಇವರ ವರ್ಗಾವಣೆಗೆ ಭಾರೀ ಪ್ರಯತ್ನ ನಡೆಸಿತ್ತೆನ್ನಲಾಗಿದೆ.

ಸರ್ಕಾರಿ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳ ಪತ್ರ ಬರೆದು, ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆರೋಪದ ಮೇಲೆ ಸುಮಾರು 30ಕ್ಕೂ ಹೆಚ್ಚು ಸಂಘ ಸಂಸ್ಥೆ ಗಳನ್ನು ಕಪ್ಪುಪಟ್ಟಿಗೆ ಸೇರಿಸಿ, ಸರ್ಕಾರಕ್ಕೆ ದಂಡ ಭರಿಸಸಿಕೊಂಡ ಲವೀಶ್‌, ಕಲ್ಯಾಣ ಕರ್ನಾಟಕ ಭಾಗದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ತೀರ ಕಳಪೆ ಮಟ್ಟದ ತೊಗರಿ ನೀಡಿ, ಕೋಟ್ಯಂತರ ರುಪಾಯಿಗಳ ವಂಚಿಸುತ್ತಿದ್ದ ಹಾಗೂ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದ ಕಲಬುರಗಿ ಮೂಲದ ಪ್ರಭಾವಿ ಆಹಾರ ಸರಬರಾಜು ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಿ ದಿಟ್ಟ ಕ್ರಮ ಕೈಗೊಂಡಿದ್ದರು. ಹತ್ತಾರು ಕೋಟಿ ರು.ಗಳ ಪಿಎಫ್‌ ಅನ್ನು ಭರಿಸಬೇಕಿದ್ದ 15ಕ್ಕೂ ಏಜೆನ್ಸಿಗಳಿಗೆ ಎಚ್ಚರಿಕೆ ನೋಟೀಸ್ ಕೊಟ್ಟು ಪಿಎಫ್ ವಂಚನೆ ತಡೆಗಟ್ಟಿದರು.

ಕೋಟಿ ರುಪಾಯಿ ಸಂಬಳ ನೌಕರಿ ಬಿಟ್ಟು ಸ್ವದೇಶಕ್ಕೆ ಬಂದ ಲವೀಶ್‌ : ರಾಜಸ್ತಾನದ ಉದಯಪುರ ಮೂಲದ ಮಧ್ಯಮವರ್ಗ ಕುಟುಂಬದ 33 ವರ್ಷ ವಯಸ್ಸಿನ ಲವೀಶ್‌, ಐಐಟಿ ಮುಂಬೈನ ಮೆಕ್ಯಾನಿಕಲ್‌ ಎಂಜಿನೀಯರಿಂಗ್‌ ಪದವೀಧರರು. ಅಮೇರಿಕದ ಟೆಕ್ಸಾನನಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಕಂಪನಿಯಲ್ಲಿ ಕೋಟ್ಯಂತರ ರುಪಾಯಿಗಳ ಸಂಬಳ ತೊರೆದು, ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆದು, 2019ರಲ್ಲಿ ಯುಪಿಎಸ್ಸಿಯಲ್ಲಿ ಮೊದಲ ಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ 18ನೇ ಸ್ಥಾನ ಗಿಟ್ಟಿಸಿಕೊಂಡವರು. ಅಮೇರಿಕದಲ್ಲಿ ಶೆಲ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಜಾಗತಿಕ ತೈಲ ಮತ್ತು ಅನಿಲ ವ್ಯವಹಾರದ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕಾರ್ಯನಿರ್ವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು: ಡಿಸಿಎಂ ಪರಮೇಶ್ವರ್ ಭೇಟಿ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಲಹೆ