ಹೊಸಪೇಟೆ: ರಾಜ್ಯದಲ್ಲಿ ಆಡಳಿತ, ಕಾನೂನು ಸುವ್ಯವಸ್ಥೆ ಸರಿ ಇಲ್ಲ, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ದೂರಿದರು.
ವಿನಯ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಇಬ್ಬರು ಶಾಸಕರು ದೌರ್ಜನ್ಯ ಮಾಡಿದ್ದಾರೆ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ. ಅದರ ಪ್ರಕಾರ ಇಬ್ಬರು ಶಾಸಕರು ಆರೋಪಿಗಳು. ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಮಾಡಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆ ಪ್ರತಿಭಟನೆಯಲ್ಲಿ ಜೆಡಿಎಸ್ ಅಂತರ ಕಾಯ್ದುಕೊಂಡಿಲ್ಲ. ಅವರೂ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಈ ಕುರಿತು ಹೇಳಿಕೆ ನೀಡಿದ್ದಾರೆ ಎಂದರು.ಬಿಜೆಪಿ ವಿಶ್ವದ ದೊಡ್ಡ ಪಕ್ಷ: ಬಿಜೆಪಿ ದೇಶದಲ್ಲಿ ಅತಿ ಚಿಕ್ಕ ಪಕ್ಷವಾಗಿ ಸಂಘಟನೆಗೊಂಡು ಈಗ ವಿಶ್ವದ ಏಕೈಕ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜ್ಯಗಳ ಪಕ್ಷದ ನಾಯಕರು, ಸಂಘದ ಪ್ರಮುಖರ ಶ್ರಮದಿಂದ ಬಿಜೆಪಿ ಪ್ರಪಂಚದ ಏಕೈಕ ದೊಡ್ಡ ಪಕ್ಷವಾಗಿದ್ದು, 12 ಕೋಟಿ ಸದಸ್ಯರಿದ್ದಾರೆ ಎಂದರು.
ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಮೇಟಿ, ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಇತರರಿದ್ದರು.