ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಕಾನೂನು ಎಂಬುದು ಅವಶ್ಯವಾಗಿದ್ದು, ಸಮಾಜದ ಸುಸ್ಥಿರ ಆಡಳಿತದಲ್ಲಿ ಕಾನೂನಿನ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಅಂಬಳೆ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಅಂಬಳೆ ಗ್ರಾಮದ ಎ.ಆರ್.ಕೃಷ್ಣಶಾಸ್ತ್ರೀ ಸಭಾ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಮಗು ತಾಯಿಯ ಗರ್ಭಾವಸ್ಥೆಯಿಂದಲೇ ಅನೇಕ ಸವಲತ್ತುಗಳನ್ನು ಪಡೆಯುತ್ತ ಹೋಗುತ್ತದೆ. ಕಾನೂನು ಎಂಬುದು ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಅವಶ್ಯವಾದದ್ದು. ಸಮಾಜದಲ್ಲಿ ಗಂಡು ಹೆಣ್ಣು ಎಂಬ ತಾರತಮ್ಯ ಹೆಚ್ಚಿದ್ದು ಅದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಸಾಮಾಜಿಕ ಪಿಡುಗುಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು ಎಂದು ಹೇಳಿದರು.ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಶಿಬಿರಗಳನ್ನು ಏರ್ಪಡಿಸಿ ಅಪೌಷ್ಟಿಕತೆ ನಿವಾರಣೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಕ್ಕಳು ಪ್ರತಿ ನಿತ್ಯ ಉತ್ತಮ ಆಹಾರ ಸೇವನೆ ಮಾಡುವುದರಿಂದ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬಹುದು ಎಂದ ಅವರು, ಸಾರ್ವಜನಿಕರು ಸರ್ಕಾರದಿಂದ ನೀಡುವಂತ ಯೋಜನೆಗಳ ಫಲವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಂಬಳೆ ಗ್ರಾಪಂ ಅಧ್ಯಕ್ಷ ದೊಡ್ಡೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಂತೇಶ್ ಭಜಂತ್ರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ಅಂಬಳೆ ಆಯುಷ್ ಅಧಿಕಾರಿ ಡಾ.ಶೋಭ ಸೇರಿ ತಾಲುಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು, ಗ್ರಾಪಂ ಅಧಿಕಾರಿ, ಸಿಬ್ಬಂದಿಗಳು ಮತ್ತು ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.ಆರೋಗ್ಯದ ಕಾಳಜಿ ವಹಿಸಿಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಜೆ. ಲಲಿತಾ ಮಾತನಾಡಿ, ಅಪೌಷ್ಟಿಕತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಹದಿಹರೆಯದ ಹೆಣ್ಣು ಮಕ್ಕಳು, ಗರ್ಭಿಣಿ, ಬಾಣಂತಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೋಷಣ್ ಮಾಸಾಚರಣೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರಿಗೆ ಪೌಷ್ಟಿಕಾಂಶದ ಮಹತ್ವ ಸಾರಲಾಗುತ್ತದೆ. ಅಲ್ಲದೇ 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಾಶನ ನೀಡಲಾಗುತ್ತದೆ. ಪ್ರತಿಯೊಬ್ಬರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.