ಬಳ್ಳಾರಿ: ಸಮಾಜದಲ್ಲಿ ವಿವಿಧ ರೀತಿಯಲ್ಲಿ ವಂಚಿತರಾದವರಿಗೆ ಕಾನೂನಿನ ಅರಿವು ಮೂಡಿಸುವುದರ ಜೊತೆಗೆ ನ್ಯಾಯ ಒದಗಿಸುವ ಸಮಾಜಮುಖಿ ಕೆಲಸದಲ್ಲಿ ಅರೆಕಾಲಿಕ ಸ್ವಯಂ ಸೇವಕರು ತೊಡಗಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನ್ಯಾ.ಕೆ.ಜಿ ಶಾಂತಿ ಅವರು ಹೇಳಿದರು.
ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎನ್ನುವ ಮಾತಿನಂತೆ ನಾಗರಿಕರು ಸುಗಮವಾಗಿ ಜೀವನ ನಡೆಸಲು ತಮ್ಮ ದೈನಂದಿನ ಜೀವನದಲ್ಲಿ ಕಾನೂನು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಸಹ ಕಾನೂನು-ಕಾಯ್ದೆಗಳ ಅರಿವು ಹೊಂದಬೇಕು ಎಂದರು.
ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ, ಬಾಲ ಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ, ಮಾದಕ ವ್ಯಸನ ಸೇರಿದಂತೆ ಇನ್ನಿತರೆ ಕಾನೂನು ಬಾಹಿರ ಪ್ರಕರಣಗಳು ಕಂಡುಬಂದಲ್ಲಿ ಅರೆ ಕಾಲಿಕ ಸ್ವಯಂ ಸೇವಕರು ಮತ್ತು ಸಾರ್ವಜನಿಕರೂ ಸಹ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ, ಅನ್ಯಾಯ ಹಾಗೂ ದೌರ್ಜನ್ಯ ತಡೆಗಟ್ಟುವ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.ಬಡತನ, ಜ್ಞಾನದ ಕೊರತೆ, ಹಾಗೂ ಅಸಹಾಯಕತೆಯಿಂದ ನ್ಯಾಯ ವಂಚಿತರಾದವರಿಗೆ ಕಾನೂನು ಕಾಯ್ದೆಗಳ ಸಲಹೆ ಒದಗಿಸಿ, ನೊಂದವರಿಗೆ ಸಕಾಲಕ್ಕೆ ನ್ಯಾಯ ಒದಗಿಸಬೇಕು ಹಾಗೂ ಬಡವರ, ನೊಂದವರ, ಮಹಿಳೆಯರ, ಕಾರ್ಮಿಕರ ಪರ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅರ್ಹ ಫಲಾನುಭವಿಗಳಿಗೆ ಕ್ರಮಬದ್ಧವಾಗಿ ತಲುಪಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್.ಎನ್ ಹೊಸಮನೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಅಪೇಕ್ಷೆ ಬಯಸದೇ ಸ್ವಯಂ ಪ್ರೇರಿತರಾಗಿ ಕಾರ್ಯನಿರ್ವಹಿಸುವ ಅರೆ ಕಾಲಿಕ ಕಾನೂನು ಸ್ವಯಂ ಸೇವಕರು ಸಮಾಜದ ಒಳಿತಿಗಾಗಿ ಶ್ರಮಿಸಿ, ಅರ್ಹರಿಗೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ ಮಾತನಾಡಿದರು.
ಈ ಸಂದರ್ಭದಲ್ಲಿ ಬಳ್ಳಾರಿಯ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾ.ಹಡಗಲಿ ರಾಮು, ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ, ಕೂಡ್ಲಿಗಿಯ ಸ್ನೇಹ ಸಂಸ್ಥೆಯ ನಿರ್ದೇಶಕ ಟಿ.ರಾಮಾಂಜನೇಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲೆಯ ಅರೆಕಾಲಿಕ ಸ್ವಯಂ ಸೇವಕರು ಹಾಗೂ ಇತರರು ಉಪಸ್ಥಿತರಿದ್ದರು.