ಡಾ. ಅಂಬೇಡ್ಕರ್ ಚಿಂತನೆ ಬದುಕಿಗೆ ದಾರಿದೀಪ

KannadaprabhaNewsNetwork | Published : Feb 17, 2025 12:36 AM

ಸಾರಾಂಶ

ಸಮಾಜದಲ್ಲಿನ ಅಸಮಾನತೆ, ಶೋಷಣೆ ತೊಲಗಿಸುವುದು ಅಂಬೇಡ್ಕರ್ ಗುರಿಯಾಗಿತ್ತು. ಸಾಮಾಜಿಕ‌ನ್ಯಾಯದ ತೇರು ಏಕಾಂಗಿಯಾಗಿ ಎಲ್ಲರ ವಿರೋಧದ ನಡುವೆ ಎಳೆದು ತಂದಿರುವೆ

ಕನ್ನಡಪ್ರಭ ವಾರ್ತೆ ಮೈಸೂರು

ಸಮಾನತೆಯ ಕನಸು ಕಂಡ ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆ ಎಲ್ಲರ ಬದುಕಿಗೂ ದಾರಿದೀಪವಾಗಿದೆ. ಅವರ ಬದುಕು, ಬರಹ, ಜೀವನ ಸಂದೇಶ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.

ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ವಿಶ್ವರತ್ನ ಚಾರಿಟಬಲ್ ಟ್ರಸ್ಟ್ ಹಾಗೂ ಎಚ್.ಎನ್. ಲಾ ಅಸೋಸಿಯೆಟ್ಸ್ ಸಹಯೋಗದ 2025ರ ಲಾಯರ್ಸ್ ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಹೋರಾಟದ ಬದುಕು ಅನುಸರಣೀಯ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾಜದಲ್ಲಿನ ಅಸಮಾನತೆ, ಶೋಷಣೆ ತೊಲಗಿಸುವುದು ಅಂಬೇಡ್ಕರ್ ಗುರಿಯಾಗಿತ್ತು. ಸಾಮಾಜಿಕ‌ನ್ಯಾಯದ ತೇರು ಏಕಾಂಗಿಯಾಗಿ ಎಲ್ಲರ ವಿರೋಧದ ನಡುವೆ ಎಳೆದು ತಂದಿರುವೆ. ಬದ್ಧತೆ ಇರುವವರು ಸಂವಿಧಾನದ ಆಶಯ ಈಡೇರಿಸುವವರೆಗೂ ಗುರಿ ತಲುಪಿಸಬೇಕು. ಆಗದಿದ್ದರೆ ಹಿಂದೆ ಎಳೆಯುವ ಕೆಲಸ ಮಾತ್ರ ಮಾಡಬೇಡಿ ಎಂದಿದ್ದರು ಎಂದು ಅವರು ತಿಳಿಸಿದರು.ಸಂವಿಧಾನದ ಮೂಲಕ ದಲಿತರಿಗಲ್ಲದೆ, ಪ್ರತಿಯೊಬ್ಬರಿಗೂ ಶಕ್ತಿ ಒದಗಿಸಿದ್ದಾರೆ. ಮೋದಿ ಪ್ರಧಾನಿಯಾಗಲು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು, ನಾನು ಕೂಡ ಶಾಸಕನಾಗಲು ಡಾ. ಅಂಬೇಡ್ಕರ್ ಅವರ ಸಂವಿಧಾನವೇ ಮೂಲಕ ಕಾರಣ. ಇಂತಹ ಸಂವಿಧಾನ ಉಳಿದರೆ ಮಾತ್ರ ಸಮಾನತೆ ಉಳಿಯಲು ಸಾಧ್ಯ. ಸಂವಿಧಾನದ ಆಶಯದಂತೆ ಸರ್ಕಾರಗಳು ಕಾರ್ಯ ನಿರ್ವಹಿಸಬೇಕು. ಪ್ರತಿಯೊಬ್ಬರು ಶಿಕ್ಷಣದೊಂದಿಗೆ ಸಂಘಟಿತರಾಗಿ ಹೋರಾಟದ ಮೂಲಕ‌ನ್ಯಾಯ ಪಡೆಯಬೇಕು ಎಂದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ದೇಶ ನಿರ್ಮಾಣ‌ಕಾರ್ಯದಲ್ಲಿ ವಕೀಲ ವೃತ್ತಿಯೂ ಒಂದಾಗಿದ್ದು, ವಕೀಲರು ಸಮಾಜವನ್ನು ಸರಿ ದಾರಿಯಲ್ಲಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುವರು. ಡಾ. ಅಂಬೇಡ್ಕರ್ ಸಂವಿಧಾನ ಶೋಷಿತರು, ಕೆಳವರ್ಗದವರಂತೆ ಮೇಲ್ವರ್ಗದವರಿಗೂ ಸಹಕಾರಿಯಾಗಿದೆ. ಆದರೆ, ದೇಶದಲ್ಲಿ ಅಂಬೇಡ್ಕರ್ ಜಯಂತಿ, ಸಂವಿಧಾನ ದಿನ ಕೆಳ ವರ್ಗದವರಿಗೆ ಮಾತ್ರ ಸೀಮಿತವಾಗಿರುವುದು ದುರಂತ ಎಂದು ವಿಷಾದಿಸಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಸಹಬಾಳ್ವೆ ಬದುಕಿಗೆ ಸಂವಿಧಾನ ಕಾರಣವಾಗಿದ್ದು, ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಎಲ್ಲ ಸಮುದಾಯದವರು ಒಗ್ಗಟ್ಟಾಗಿ ನಡೆಯುವ ಮಾರ್ಗ ತೋರಿದೆ. ಆದರೆ, ಇಂದು ಸಂವಿಧಾನ ಬದಲಾಯಿಸಬೇಕು ಎನ್ನುವ ಮಾತು ಕೇಳಿ ಬರುತ್ತಿದೆ. ಇದು ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅರಿವು ಮೂಡಿಸಲು ಶಾಲಾ ಕಾಲೇಜು ಹಾಗೂ ಸರ್ಕಾರಿ ಕಾರ್ಯಕ್ರಮದಲ್ಲಿ ಸಂವಿಧಾನ‌ಪೀಠಿಕೆ ಓದಿಸಲಾಗುತ್ತಿದೆ ಎಂದರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸರ್ಕಾರಿ ವಕೀಲ ತಿಮ್ಮಯ್ಯ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಲೋಕೇಶ, ಉಪಾಧ್ಯಕ್ಷ ಎಂ.ವಿ. ಚಂದ್ರಶೇಖರ, ಹಿರಿಯ ವಕೀಲರಾದ ಪುಟ್ಟಸ್ವಾಮಿ, ಎನ್. ಭಾಸ್ಕರ್, ಉಮೇಶ, ಎಚ್.ಪಿ. ಸೋಮಶೇಖರ್, ಕಾಂತರಾಜು, ವಿನೋದಾ, ಮಹದೇವಸ್ವಾಮಿ ಮೊದಲಾದವರು ಇದ್ದರು.

----

ಕೋಟ್...

ನನ್ನ ಅಧಿಕಾರವಧಿಯಲ್ಲಿ ಸಂವಿಧಾನಕ್ಕೆ ಬದ್ಧವಾಗಿ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವೆ. ನಾನು ಎಂದಿಗೂ ಯಾವ ಜಾತಿ, ಪಕ್ಷ ನೋಡುವುದಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ವಕೀಲರು ಕಿವಿಗೋಡಬಾರದು. ನಾನು ಪಕ್ಷಾತೀತ, ಜಾತ್ಯಾತೀತ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಿದ್ದರೂ ನಮ್ಮ ಮೇಲೆ ಕೆಲವು ಆಪಾದನೆ ಬರುತ್ತಿದೆ. ಈ ಸಂಬಂಧ ವಕೀಲರಿಗೆ ಅನುಮಾನಗಳಿದ್ದರೆ ನನ್ನೊಂದಿಗೆ ಮುಕ್ತವಾಗಿ ಚರ್ಚಿಸಿ.

- ಜಿ.ಟಿ. ದೇವೇಗೌಡ, ಶಾಸಕ

Share this article