ಬಾಕಿ ಉಳಿದಿರುವ ಪ್ರಕರಣ ಇತ್ಯರ್ಥಕ್ಕೆ ವಕೀಲರು ಸಹಕಾರ ಅಗತ್ಯ: ನ್ಯಾ.ಆನಂದ್

KannadaprabhaNewsNetwork |  
Published : Jun 25, 2025, 11:47 PM IST
25ಕೆಎಂಎನ್ ಡಿ14 | Kannada Prabha

ಸಾರಾಂಶ

ವಕೀಲರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದರಷ್ಟೇ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಸಾಧ್ಯ. ಆದ್ದರಿಂದ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ನಾಗಮಂಗಲ ನ್ಯಾಯಾಲಯವು ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆದು ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಮುಂಬರುವ ಲೋಕ ದಾಲತ್‌ನಲ್ಲಿ ಎಲ್ಲ ವಕೀಲರೂ ಕೈಜೋಡಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ವ್ಯಾಜ್ಯ ಎಂಬುದು ನಿಂತ ನೀರಲ್ಲ. ಬಾಕಿ ಪ್ರಕರಣಗಳು ಇತ್ಯರ್ಥವಾದಷ್ಟು ಮತ್ತಷ್ಟು ವ್ಯಾಜ್ಯಗಳು ಅಕ್ಷಯ ಪಾತ್ರೆಯಂತೆ ವಕೀಲರ ಬಳಿ ಬರುತ್ತವೆ. ಜು.12ರಂದು ನಡೆಯುವ ಈ ವರ್ಷದ 2ನೇ ಲೋಕ ಅದಾಲತ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ವಕೀಲರು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಮನವಿ ಮಾಡಿದರು.

ಪಟ್ಟಣದ ವಕೀಲರ ಸಂಘದಲ್ಲಿ ಬುಧವಾರ ನಡೆದ ಲೋಕ ಅದಾಲತ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ನಾಗಮಂಗಲ ತಾಲೂಕು ಮುಂಚೂಣಿಯಲ್ಲಿದೆ. ಜು.12ರಂದು ನಡೆಯುವ ಲೋಕ ಅದಾಲತ್‌ನಲ್ಲಿ ಮತ್ತಷ್ಟು ಪ್ರಕರಣಗಳು ಇತ್ಯರ್ಥವಾಗಬೇಕು ಎಂಬುದು ನಮ್ಮ ಆಶಯ ಎಂದರು.

ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ವ್ಯಾವಹಾರಿಕ ಸಾಧನ, ಅಪಘಾತ, ಚೆಕ್‌ಬೌನ್ಸ್ ಹಾಗೂ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ವಕೀಲರು ಸಹಕರಿಸಬೇಕು. ವಾರೆಂಟ್ ಮತ್ತು ಸಮನ್ಸ್ ಜಾರಿಯಾಗದ ಸುಮಾರು 800 ಪ್ರಕರಣಗಳ ಪೈಕಿ 700 ಪ್ರಕರಣಗಳು ವಾರೆಂಟ್ ಹಂತದಲ್ಲಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ವಿಶೇಷ ತಂಡ ರಚಿಸಿ ವಾರೆಂಟ್, ಸಮನ್ಸ್ ಜಾರಿ ಮಾಡಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ವಕೀಲರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದರಷ್ಟೇ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಸಾಧ್ಯ. ಆದ್ದರಿಂದ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಮೂಲಕ ನಾಗಮಂಗಲ ನ್ಯಾಯಾಲಯವು ಜಿಲ್ಲೆಯಲ್ಲಿಯೇ ಮೊದಲ ಸ್ಥಾನ ಪಡೆದು ಮಂಡ್ಯ ಜಿಲ್ಲೆ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಮುಂಬರುವ ಲೋಕ ದಾಲತ್‌ನಲ್ಲಿ ಎಲ್ಲ ವಕೀಲರೂ ಕೈಜೋಡಿಸಬೇಕು ಎಂದರು.

ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಫೇಲಿಕ್ಸ್ ಅಲ್ಫೋನ್ಸ್ ಅಂಥೋನಿ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹಮೂರ್ತಿ, ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜು, ಅಪರ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವ, ಉಪಾಧ್ಯಕ್ಷ ಎಚ್.ಜೆ. ಉಮೇಶ್ ಸೇರಿ ಹಿರಿಯ ಮತ್ತು ಕಿರಿಯ ವಕೀಲರು, ನ್ಯಾಯಾಲಯದ ಸಿಬ್ಬಂದಿ ಸೋನುಮೂರ್ತಿ, ರಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ