ಹೊಸಕೋಟೆ: ಪೊಲೀಸರ ಏಕಪಕ್ಷೀಯ ವರ್ತನೆಯಿಂದ ವಕೀಲರ ರಕ್ಷಣೆ, ಅವೈಜ್ಞಾನಿಕ ಬಾರ್ ಕೌನ್ಸಿಲ್ ಪರೀಕ್ಷೆ ರದ್ದು ಮಾಡುವುದು, ಕಿರಿಯ ವಕೀಲರಿಗೆ ಮಾಸಿಕ 10 ಸಾವಿರ ಸಹಾಯಧನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ವಕೀಲರ ಒಕ್ಕೂಟ ಸಹಿ ಸಂಗ್ರಹ ಆಂದೋಲನ ಮತ್ತು ಪ್ರತಿಭಟನೆ ಹಮ್ಮಿಕೊಂಡಿತ್ತು.
ಬಳಿಕ ಮಾತನಾಡಿದ ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹರೀಂದ್ರ, ಜನತೆಗೆ ನ್ಯಾಯ ದೊರಕಿಸಿ ಕೊಡುವ ಮಹತ್ವದ ಕೆಲಸ ಮಾಡುತ್ತಿರುವ ವಕೀಲರಿಗೆ ಹಲವು ಸಮಸ್ಯೆಗಳಿದ್ದು, ಸರ್ಕಾರಗಳು ಅವುಗಳನ್ನು ಪರಿಹರಿಸುವ ಕೆಲಸ ಮಾಡಬೇಕಿದೆ. ರಾಜ್ಯದ ಎಲ್ಲಾ ತಾಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ೫ ಲಕ್ಷ, ಜಿಲ್ಲಾ ಸಂಘಗಳಿಗೆ 10 ಲಕ್ಷ ರು. ಅನುದಾನ ಮಂಜೂರು ಮಾಡಬೇಕು ಎಂದರು.
ರಾಜ್ಯ ಸರ್ಕಾರ ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯ ಒದಗಿಸಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿಗಳನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿನ ಎಲ್ಲ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಚೇಂಬರ್‌ಗಳನ್ನು ಸ್ಥಾಪಿಸಬೇಕು. ಕಂದಾಯ ಪುಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು, ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ಕೆ.ಎನ್.ನಾಗರಾಜ್, ರವಿಕುಮಾರ್, ಕೈವಾರ ರವಿ ಇತರರಿದ್ದರು.
ಫೋಟೋ: 16 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.