ವಕೀಲರಿಗೆ ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಇರಲಿ: ನ್ಯಾಯಮೂರ್ತಿ ಸಂದೇಶ್

KannadaprabhaNewsNetwork |  
Published : Dec 08, 2025, 01:30 AM IST
ಚಿಕ್ಕಮಗಳೂರಿನ ಟಿ.ಎಂ.ಎಸ್. ಕಾಲೇಜಿನ ರೋಟರಿ ಸಭಾಂಗಣದಲ್ಲಿ ಶನಿವಾರ ಸಂಜೆ ಚಿಕ್ಕಮಗಳೂರು ವಕೀಲರ ಸಂಘದಿಂದ ಆಯೋಜಿಸಿದ್ಧ ವಕೀಲರ ದಿನಾಚರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹೈಕೋರ್ಟ್‌ನ ನ್ಯಾಯಾಧೀಶರಾದ ಎಚ್‌.ಪಿ. ಸಂದೇಶ್‌ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಬೇಕು. ವೃತ್ತಿಯಲ್ಲಿ ಸಾರ್ಥಕತೆ ಕಂಡುಕೊಂಡು ನಿಷ್ಠೆ, ಪ್ರಾಮಾಣಿಕತೆಯಿಂದ ವಾದ ಮಂಡಿಸುವ ಮುಖೇನ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ನಾಯಮೂರ್ತಿ ಎಚ್.ಪಿ.ಸಂದೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಕ್ಷಿದಾರರನ್ನು ವಕೀಲರು ಅನ್ನದಾತರೆಂದು ಭಾವಿಸಬೇಕು. ವೃತ್ತಿಯಲ್ಲಿ ಸಾರ್ಥಕತೆ ಕಂಡುಕೊಂಡು ನಿಷ್ಠೆ, ಪ್ರಾಮಾಣಿಕತೆಯಿಂದ ವಾದ ಮಂಡಿಸುವ ಮುಖೇನ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ನಾಯಮೂರ್ತಿ ಎಚ್.ಪಿ.ಸಂದೇಶ್ ಹೇಳಿದರು.

ನಗರದ ಟಿ.ಎಂ.ಎಸ್. ಕಾಲೇಜಿನ ರೋಟರಿ ಸಭಾಂಗಣದಲ್ಲಿ ಶನಿವಾರ ಸಂಜೆ ಚಿಕ್ಕಮಗಳೂರು ವಕೀಲರ ಸಂಘದಿಂದ ಆಯೋಜಿಸಿದ್ಧ ವಕೀಲರ ದಿನಾಚರಣೆ, ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಕೀಲರ ಮೇಲೆ ನಂಬಿಕೆ, ವಿಶ್ವಾಸವನ್ನಿಟ್ಟು ಕಕ್ಷಿದಾರರು ಆಗಮಿಸುತ್ತಾರೆ. ಆ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಬೇಕು. ಪ್ರಕರಣದಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ವಕೀಲರು ಪ್ರಯತ್ನವಿಲ್ಲದೇ ಸೋಲನ್ನು ಒಪ್ಪಿಕೊಳ್ಳಬಾರದು. ಕಕ್ಷಿದಾರರು ನೀಡಿದ ಶುಲ್ಕಕ್ಕೆ ಸತ್ಯ, ನಿಷ್ಠೆಯಿಂದ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜದ ಬದಲಾವಣೆ, ಒಳಿತನ್ನು ಬಯಸುವ ವೃತ್ತಿ ವಕೀಲರದು. ರಾಷ್ಟ್ರದ ಏಳಿಗೆಗಾಗಿ ಗಾಂಧೀಜಿ, ನೆಹರು, ಅಂಬೇಡ್ಕರ್‌, ಸರ್ದಾರ್ ವಲ್ಲಬಾಯಿ ಪಟೇಲ್ ಹಾಗೂ ರಾಜ್ಯದಲ್ಲಿ ಜನರಿಂದ ಪ್ರಥಮವಾಗಿ ಚುನಾಯಿತರಾದ ಕೆಂಗಲ್ ಹನುಮಂತಯ್ಯ ಸೇರಿದಂತೆ ಅನೇಕ ಸಚಿವರು ವಕೀಲರಾದ ಮೇಲೆ ದೇಶದಲ್ಲಿ ಉನ್ನತ ಸ್ಥಾನಮಾನ ಗಳಿಸಿದ್ದಾರೆ ಎಂದು ತಿಳಿಸಿದರು.

ದೀಪ ಉರಿದು ಬೆಳಕು ನೀಡಿದಂತೆ, ವಕೀಲರು ಕಕ್ಷಿದಾರರ ಹಿತ ಕಾಪಾಡಲು ಜವಾಬ್ದಾರಿ ಹೊರಬೇಕು. ನೊಂದವರ ಹಕ್ಕಿಗೆ ಚ್ಯುತಿ, ದೌರ್ಜನ್ಯಕ್ಕೆ ಒಳಗಾದಾಗ ದೀಪದ ಬೆಳಕಿನಂತೆ ದಾರಿ ತೋರಿಸಬೇಕು. ಪೂರ್ವಿಕರು ಉಳಿಸಿದ ವಕೀಲ ವೃತ್ತಿಗೆ ಆಧುನಿಕ ಜಗತ್ತಿನಲ್ಲಿ ಸ್ವಾರ್ಥಕ್ಕೆ ಬಳಸುವುದು ಸರಿಯಲ್ಲ. ಈ ಬಗ್ಗೆ ವಕೀಲರು ತಮ್ಮಲ್ಲಿ ಅವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪರಿಪಕ್ವತೆ, ಚಾಕಚಕ್ಯತೆ, ಕಾನೂನು ತಿಳುವಳಿಕೆ, ಪುಸ್ತಕಗಳ ಅಭ್ಯಾಸದಿಂದ ವಕೀಲರು ಸಮರ್ಥರಾಗುತ್ತಾರೆ. ಕಕ್ಷಿಗಾರರು ನ್ಯಾಯಾಲಯಕ್ಕೆ ಮೋಜು, ಮಸ್ತಿಗಾಗಿ ಬರುವುದಿಲ್ಲ. ನೋವು, ದೌರ್ಜನ್ಯ, ಅನ್ಯಾಯವನ್ನು ಮೆಟ್ಟಿ ನಿಲ್ಲಲು ವಕೀಲರ ಹತ್ತಿರ ಧಾವಿಸುತ್ತಾರೆ. ಇದನ್ನು ಸವಾಲಾಗಿ ವಕೀಲರು ಸ್ವೀಕರಿಸಿ ನ್ಯಾಯಬದ್ಧವಾಗಿ ವಾದ ಮಂಡಿಸಬೇಕು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ವಕೀಲ ವೃತ್ತಿಯಲ್ಲಿ ಶಿಸ್ತು, ಸಮಯಪ್ರಜ್ಞೆ ಮತ್ತು ಪರಿಶ್ರಮದಿಂದ ಕೆಲಸ ನಿರ್ವಹಿಸಿದಾಗ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯ. ಹಿರಿಯ ವಕೀಲರ ಸನ್ಮಾರ್ಗದಲ್ಲಿ ಸಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ನಾಡಿನ ಶ್ರೇಷ್ಟ ವಕೀಲರಾಗಿ ಸಾಧನೆ ಮಾಡಬಹುದು ಎಂದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅನಿಲ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಡುವಿಲ್ಲದ ವಕೀಲ ವೃತ್ತಿಯಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಖುಷಿಯ ಸಂಗತಿ. ಜೊತೆಗೆ ವೃತ್ತಿಯಲ್ಲಿ ನೊಂದವರ ಬಾಳಿಗೆ ಅಂಬೇಡ್ಕರ್ ಆಶಯದಂತೆ ನ್ಯಾಯ ಒದಗಿಸುವ ಸದ್ಗುಣ ಬೆಳೆಸಿಕೊಂಡರೆ ಉತ್ತಮ ವಕೀಲರಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.

ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎಂ.ವಿ.ಪ್ರಿಯದರ್ಶಿನಿ ಹಾಜರಿದ್ದರು. ವಕೀಲರಾದ ಶರತ್‌ಚಂದ್ರ ಸ್ವಾಗತಿಸಿದರು. ಎಸ್.ಎಸ್.ವೆಂಕಟೇಶ್ ನಿರೂಪಿಸಿದರು. ದೀಪಕ್ ವಂದಿಸಿದರು. ಅರುಂಧತಿ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌