ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಬೆಂಗಳೂರು ಮತ್ತು ವಕೀಲರ ಸಂಘ ರಬಕವಿ-ಬನಹಟ್ಟಿ ಜಂಟಿಯಾಗಿ ಶನಿವಾರ ಆಯೋಜಿಸಿದ್ದ ಯುವ ವಕೀಲರಿಗೆ ತಾಲೂಕು ಮಟ್ಟದ ೩ ದಿನಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಮ್ಮ ಭಾಷೆ, ಸಂಸ್ಕೃತಿ ನಮ್ಮ ಮೂಲವಾಗಿದೆ. ಆದರೆ ಕಲಾಪಗಳಲ್ಲಿ ವಾದ ಮಂಡಿಸುವಾಗ ನಮಗೆ ಇಂಗ್ಲಿಷ್ ಭಾಷೆಯಲ್ಲಿ ಪ್ರಬುದ್ಧತೆ ಬೇಕು. ಯುವ ವಕೀಲರು ವಾದಮಂಡನೆ ಸಂದರ್ಭದಲ್ಲಿ ಹಿರಿಯ ವಕೀಲರ ವಾದ ಮಂಡನೆ ಶೈಲಿ, ಶಿಸ್ತು ಪಾಲನೆ, ಭಾಷೆಯ ಮೇಲಿನ ಹಿಡಿತ, ವರ್ತನೆ, ಕೌಶಲ್ಯ, ವಿಷಯದ ಮೇಲಿನ ಅಮೂಲಾಗ್ರ ಜ್ಞಾನ ಇವುಗಳನ್ನು ಅವಲೋಕಿಸಿ ಅಳವಡಿಸಿಕೊಳ್ಳಬೇಕು. ವೃತ್ತಿಯಲ್ಲಿ ಕೀಳರಿಮೆ ಹೊಂದದೆ ತಾಳ್ಮೆ, ಕಲಿಕಾ ಏಕಾಗ್ರತೆ, ಕೌಶಲ್ಯ ಹೊಂದಿ ಶ್ರಮಪಟ್ಟರೆ ಯಶಸ್ವಿ ವಕೀಲರಾಗುವುದು ಖಂಡಿತ ಸಾಧ್ಯವಿದೆ ಎಂದರು.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ರಾಜೇಂದ್ರ ಮುರುಳೀಧರ ಬದಾಮಿಕರ ಮಾತನಾಡಿ, ಶಿಬಿರಗಳು ವಕೀಲರ ಅಂತಃಸತ್ವವನ್ನು ವೃದ್ಧಿಸುವ ಮತ್ತು ಕಾನೂನುಗಳ ಹೊಸ ಆಯಾಮಗಳ ಅರಿವು ಮೂಡಿಸುವ ಮತ್ತು ಭಿನ್ನ ಸಂದರ್ಭದಲ್ಲಿ ತೀರ್ಪುಗಳನ್ನು ವಿಶ್ಲೇಷಣೆ ಮಾಡುವ ಮೂಲಕ ಅನುಭವಗಳನ್ನು ಕಟ್ಟಿಕೊಡಲು ಸಹಕಾರಿಯಾಗಿವೆ. ಭಾಷೆಯ ಸಮರ್ಥ ಬಳಕೆಯ ಶೈಲಿ, ವಿಷಯ ಮಂಡನೆ ರೀತಿಯ ಬಗ್ಗೆ ತಿಳುವಳಿಕೆ ದೊರೆಯುತ್ತದೆ. ಕರ್ತವ್ಯ ನಿಷ್ಠೆ, ವೃತ್ತಿ ಘನತೆ ಕಾಯ್ದುಕೊಂಡು ಯುವ ವಕೀಲರು ನಿರಂತರ ಅಧ್ಯಯನಶೀಲರಾಗಬೇಕು. ಹಿರಿಯರಿಂದ ಜ್ಞಾನದ ಲಾಭ ಪಡೆದುಕೊಂಡು ಕಕ್ಷಿದಾರರಿಗೆ ನ್ಯಾಯ ಒದಗಿಸಲು ಬದ್ಧರಾಗಬೇಕೆಂದರು.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಎಸ್.ಎಸ್. ಮಿಟ್ಟಲಕೋಡ, ವಿ.ಡಿ. ಕಾಮರೆಡ್ಡಿ, ಎಸ್.ಎಚ್. ಆಸೀಫ್ ಅಲಿ ಮಾತನಾಡಿ, ಯುವ ವಕೀಲರಿಗೆ ವೃತ್ತಿಯಲ್ಲಿನ ರೀತಿ-ನಿಯಮಗಳು, ಸಿವಿಲ್, ಕ್ರಿಮಿನಲ್ ಅರ್ಜಿ ಸಿದ್ಧಗೊಳಿಸುವಲ್ಲಿ ಗ್ರಹಿಸಬೇಕಾದ ಅಂಶಗಳು, ವಾದ ಮಂಡನೆಯಲ್ಲಿ ಸಂಭಾವ್ಯ ಪ್ರತಿವಾದಕ ಅಂಶಗಳಿಗೆ ನೀಡಬೇಕಾದ ಪರ ಉತ್ತರ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಹಿರಿಯ ಸಂಪನ್ಮೂಲ ವ್ಯಕ್ತಿಗಳು ಲಭ್ಯವಿದ್ದು, ರಾಜ್ಯಾದ್ಯಂತ ಹೆಚ್ಚು ಕಾರ್ಯಾಗಾರಗಳನ್ನು ನಿರ್ವಹಿಸಲು ಪರಿಷತ್ ಬದ್ಧವಿದೆ. ಇದಕ್ಕೆ ಯಾವುದೇ ಆರ್ಥಿಕ ಕೊರತೆಯಿಲ್ಲ ಎಂದರು. ಹಿರಿಯ ನ್ಯಾಯವಾದಿ ಈಶ್ವರಚಂದ್ರ ಭೂತಿ ನೇತೃತ್ವದ ವಕೀಲರ ತಂಡ ಮುಧೋಳ ನ್ಯಾಯಾಲಯದ ವ್ಯಾಪ್ತಿಯ ಕೆಲ ಪ್ರದೇಶಗಳ ಪ್ರಕರಣಗಳು ವರ್ಗಾವಣೆಯಾಗಿರುವ ಕಾರಣ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರನ್ನು ನೇಮಕಗೊಳಿಸಲು ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಬಾಗಲಕೋಟ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಎನ್.ವಿ.ವಿಜಯ, ಜಿಲ್ಲಾ ಹೆಚ್ಚುವರಿ ನ್ಯಾಧೀಶ ಅರ್ಜುನ ಮುಳ್ಳೂರ, ಕಿರಣಕುಮಾರ ವಡಗೇರಿ, ಸುಷ್ಮ ಟಿ.ಸಿ. ರಬಕವಿ-ಬನಹಟ್ಟಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಉಪಸ್ಥಿತರಿದ್ದರು.ಸುಧಾ ಪಕೀರಪುರ ಪ್ರಾರ್ಥಿಸಿದರು. ಎಸ್.ವಿ.ಸತ್ತಿಕರ ಸ್ವಾಗತಿಸಿದರು. ಎಂ.ಜಿ.ಕೆರೂರ ಪ್ರಾಸ್ತಾವಿಕ ಮಾತುಗಳಾಡಿದರು. ವರ್ಧಮಾನ ಕೋರಿ ನಿರೂಪಿಸಿದರು. ಎ.ಎಸ್.ಗೋಡಬೋಲೆ ವಂದಿಸಿದರು.
ಸಮಾರಂಭದಲ್ಲಿ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಎಸ್.ಎಸ್.ಪಾಟೀಲ, ಶಿವರಾಜ್ ಮುಧೋಳ, ಬಿ.ವಿ.ಕೆರೂರ, ಎಂ.ಸಿ. ಕೌಜಲಗಿ, ಆರ್.ವಿ.ಕಾಮಗೊಂಡ, ಸುರೇಶ ಗೊಳಸಂಗಿ, ಅರವಿಂದ ವ್ಯಾಸ, ಕೆ.ಡಿ. ತುಬಚಿ, ಕಿರಣಕುಮಾರ ದೇಸಾಯಿ, ಎ.ಎಸ್. ಸಲಬನ್ನವರ, ಪಿ.ಜಿ. ಪಾಟೀಲ, ಎಸ್.ಎಂ. ಫಕೀರಪೂರ, ವೈ.ಬಿ. ಕೊರಬು, ವಿಶ್ವಜ ಕಾಡದೇವರ, ರವೀಂದ್ರ ಸಂಪಗಾಂವಿ, ಎಂ.ಸಿ. ಹುಕ್ಕೇರಿ, ಬಿ.ಸಿ. ತುಂಗಳ, ಕೆ.ಜಿ. ಸಾಲ್ಗುಡೆ, ಸರ್ಕಾರಿ ಅಭಿಯೋಜಕಿ ಆರ್.ಭವ್ಯ ಸೇರಿದಂತೆ ನೆರೆಯ ಜಿಲ್ಲೆಗಳ ಪ್ರಧಾನ ನ್ಯಾಯಾಧೀಶರು, ನೂರಾರು ಸಂಖ್ಯೆಯ ವಕೀಲರು ಪಾಲ್ಗೊಂಡಿದ್ದರು.