ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್

KannadaprabhaNewsNetwork |  
Published : Nov 21, 2025, 02:15 AM IST
ಪೊಟೋ-ಲಕ್ಷ್ಮೇಶ್ವರ ಬಂದ್‌ನಿಂದ ಬಿಕೋ ಎನ್ನುತ್ತಿರುವ ಬಜಾರ್ ರಸ್ತೆಯ ನೋಟ, ಪೊಟೋ-ಪಟ್ಟಣದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದರು.ಪೊಟೋ-ರೈತಪರ ಹೋರಾಟದಲ್ಲಿ ವಿವಿಧ ರೈತ ಮುಖಂಡರು ಭಾಗವಹಿಸಿ ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದಿರುವ ಹಿನ್ನೆಲೆ ವಿವಿಧ ರೈತಪರ ಸಂಘಟನೆಗಳು ಗುರುವಾರ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ‌ ನೀಡಿದ್ದರು.

ಲಕ್ಷ್ಮೇಶ್ವರ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಅಂಗವಾಗಿ ಗುರುವಾರ ನಡೆದ ಲಕ್ಷ್ಮೇಶ್ವರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಗುರುವಾರ ಬೆಳಗ್ಗೆಯಿಂದಲೆ ರೈತ ಸಂಘಟನೆಗಳು ಕರೆದಿದ್ದ ಲಕ್ಷ್ಮೇಶ್ವರ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಬೆಳಗ್ಗೆಯಿಂದಲೇ ಬಜಾರನ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್‌ಗಳು ಇಲ್ಲದೆ ಬಿಕೋ ಎನ್ನುತ್ತಿತ್ತು. ಬಸ್ಸುಗಳು ಇಲ್ಲದೆ ಪ್ರಯಾಣಿಕರು ಪರದಾಡಿದರು.

ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸದಿರುವ ಹಿನ್ನೆಲೆ ವಿವಿಧ ರೈತಪರ ಸಂಘಟನೆಗಳು ಗುರುವಾರ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ‌ ನೀಡಿದ್ದರು. ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು, ವ್ಯಾಪಾರಸ್ಥರು ಬಂದ್‌ಗೆ ಸಾಥ್ ನೀಡಿದ್ದಾರೆ. ರೈತರ ಹೋರಾಟದ ಕಿಚ್ಚು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಲಕ್ಷ್ಮೇಶ್ವರ ಬಂದ್ ಪ್ರಯುಕ್ತ, ಪಟ್ಟಣದ ಅಂಗನವಾಡಿ ಕೇಂದ್ರಗಳು, ಶಾಲಾ‌- ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದರು.ಗೋವಿನಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ, ಮಳೆಯಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ, ಬೆಳೆವಿಮೆ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ವಿವಿಧ ರೈತಪರ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.

ಗುರುವಾರ ಬೆಳಗ್ಗೆ ನೂರಾರು ರೈತರು ಹಾವಳಿ ಹನುಮಪ್ಪನ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಪ್ರತಿಭಟನಾಕಾರರು ಬಜಾರ್ ರಸ್ತೆಯ ಮೂಲಕ ಸಾಗಿ ಹೊಸ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ನಡೆಸಿದರು. ಮರಳಿ ಶಿಗ್ಲಿ ಕ್ರಾಸ್ ಹತ್ತಿರ ಆಗಮಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ಸಭೆಯಲ್ಲಿ ಆದ್ರಳ್ಳಿಯ ಗವಿಮಠದ ಡಾ.ಕುಮಾರ ಮಹಾರಾಜರು, ಕುಂದಗೋಳದ ಬಸವಣ್ಣ ಸ್ವಾಮಿಗಳು, ಹೂವಿನಶಿಗ್ಲಿಯ ಚನ್ನವೀರ ಸ್ವಾಮಿಗಳು, ಲಕ್ಷ್ಮೇಶ್ವರದ ಕರೆವಾಡಿ ಮಠದ ಮಳೆ ಮಲ್ಲಿಕಾರ್ಜುನ ಸ್ವಾಮಿಗಳು ಭಾಗವಹಿಸಿದ್ದರು.ಪ್ರತಿಭಟನೆಯಲ್ಲಿ ರೈತಪರ ಮುಖಂಡ ಬಸಣ್ಣ ಬೆಂಡಿಗೇರಿ, ಮಂಜುನಾಥ ಮಾಗಡಿ, ಪೂರ್ಣಾಜಿ ಕರಾಟೆ, ಎಂ.ಎಸ್. ದೊಡ್ಡಗೌಡರ, ಮಹೇಶ ಹೊಗೆಸೊಪ್ಪಿನ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಜಯಕ್ಕ ಕಳ್ಳಿ, ಹೊನ್ನಪ್ಪ ವಡ್ಡರ, ಟಾಕಪ್ಪ ಸಾತಪೂತೆ, ಚನ್ನಪ್ಪ ಜಗಲಿ, ಪರಮೇಶಗೌಡ ಪಾಟೀಲ, ಚನ್ನಪ್ಪ ಷಣ್ಮುಖಿ, ಶಿಗ್ಲಿಯ ರಾಮಣ್ಣ ಲಮಾಣಿ, ಎಸ್.ಪಿ. ಬಳಿಗಾರ, ಶಿವನಗೌಡ ಪಾಟೀಲ, ಡಿ.ವೈ. ಹುನಗುಂದ, ಈರಣ್ಣ ಪವಾಡದ, ಶರಣು ಗೋಡಿ, ನೀಲಪ್ಪ ಶೆರಸೂರಿ, ಶಿವಾನಂದ ದೇಸಾಯಿ, ಬಸಣ್ಣ ಹಂಜಿ, ಬಸವರಾಜ ಹಿರೇಮನಿ, ಬಸವರಾಜ ಮೇಲ್ಮುರಿ, ನೀಲಪ್ಪ ಕರ್ಜಕ್ಕಣ್ಣವರ, ರಮೇಶ ಹಂಗನಕಟ್ಟಿ, ಪ್ರಕಾಶ ಕೊಂಚಿಗೇರಿಮಠ, ಶೇಖಣ್ಙ ಕಾಳೆ, ದಾದಾಪೀರ್ ಮುಚ್ಚಾಲೆ, ಉಮೇಶ ನಾಯ್ಕ್, ಬಸವಣ್ಣೆಪ್ಪ ನಂದೆಣ್ಣನವರ, ಸುರೇಶ ಹಟ್ಟಿ, ಮಹಾದೇವಗೌಡ ನರಸಮ್ಮನವರ, ನಜೀರ್ ಅಹ್ಮದ್ ಗದಗ, ವಕೀಲರ ಮಹೇಶ ಹಾರೂಗೇರಿ, ಎ.ಬಿ. ಪಾಟೀಲ, ಅಶೋಕ ಬಟಗುರ್ಕಿ, ಬಸವೇಶ ಮಹಾಂತಶೆಟ್ಟರ, ಮಾಣಿಕ್ಯ ಚಿಲ್ಲೂರ, ನಾಗರಾಜ ಬಟಗುರ್ಕಿ, ಮಂಜುನಾಥ ಹೊಗೆಸೊಪ್ಪಿನ, ಚಂದ್ರು ಮಾಗಡಿ ಇತರರು ಇದ್ದರು. ಅಹಿತಕರ ಘಟನೆ ನಡೆಯದಂತೆ ಪಟ್ಟಣದಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

ಡಾ. ಕುಮಾರ ಮಹಾರಾಜ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಲಕ್ಷ್ಮೇಶ್ವರ: ಕಳೆದ ಐದು ದಿನಗಳಿಂದ ಪಟ್ಟಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರು ನಡೆಸುತ್ತಿರುವ ಹೋರಾಟದಲ್ಲಿ ಆಮರಣ ಉಪವಾಸ ಕುಳಿತಿದ್ದ ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೋರಾಟ ವೇದಿಕೆಯಲ್ಲಿ ಶ್ರೀಗಳ ಆರೋಗ್ಯವು ಹದಗೆಡುತ್ತಿರುವುದನ್ನು ಗಮನಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಗುರುವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಕುಮಾರ ಮಹಾರಾಜರನ್ನು ಆ್ಯಂಬುಲೆನ್ಸ್‌ ಮೂಲಕ ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ.ಈ ಕುರಿತು ವೈದ್ಯಾಧಿಕಾರಿ ವಿರುಪಾಕ್ಷಿ ಪಾಟೀಲ ಪ್ರತಿಕ್ರಿಯಿಸಿ, ಶ್ರೀಗಳ ಬಿಪಿ, ಶುಗರ್ ಮಟ್ಟ ಕಡಿಮೆಯಾಗಿದೆ. ಪಲ್ಸ್ ರೇಟ್ ಜಾಸ್ತಿಯಾಗಿ ಸುಸ್ತು ಆಗಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಶ್ರೀಗಳಿಗೆ ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ ಇರುವುದರಿಂದ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ