ಮುಖಂಡರ ಸಭೆ ನಡೆಸಿ ಪೀಠದ ಸ್ಥಳ ತೀರ್ಮಾನ: ಸಿ.ಸಿ. ಪಾಟೀಲ

KannadaprabhaNewsNetwork |  
Published : Sep 30, 2025, 01:00 AM IST
(ಫೋಟೊ 29ಬಿಕೆಟಿ2,(1) ಕೂಡಲಸಂಗಮದಲ್ಲಿ ಸಮಾಜದ ಮುಖಂಡರೊಂದಿಗೆ ಊಟ ಸವಿದ ಮಾಜಿ ಸಚಿವ ಸಿ.ಸಿ.ಪಾಟೀಲ, ಅರವಿಂದ ಬೆಲ್ಲದ, ಎಚ್.ಎಸ್.ಶಿವಶಂಕರ.) | Kannada Prabha

ಸಾರಾಂಶ

ನಾವೆಲ್ಲರೂ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನೈತಿಕ ಬೆಂಬಲಕ್ಕಾಗಿ ಬಂದಿದ್ದೇವೆ. ಇಡೀ ಸಮಾಜ, ನಾವು ಅಖಂಡ ಬಂಡೆಯಂತೆ ನಿಂತಿದ್ದೇವೆ. ಕೆಲವೇ ದಿನಗಳಲ್ಲಿ ಬಾಗಲಕೋಟೆ, ಹುಬ್ಬಳ್ಳಿ ಅಥವಾ ಧಾರವಾಡ ಯಾವುದಾದರೂ ಒಂದು ಸ್ಥಳದಲ್ಲಿ ಸಮಾಜದ ಮುಖಂಡರ ಸಭೆ ಮಾಡಿ ಮುಂದಿನ ನಡೆ ಪ್ರಕಟಿಸುತ್ತೇವೆ. ಮುಂದಿನ ನಡೆ ಏನಿರಬೇಕು ಎಂಬುದರ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿದ್ದೇವೆ. ಮುಂದಿನ ಸಭೆಯಲ್ಲಿಯೇ ಎಲ್ಲವನ್ನೂ ತಿಳಿಸುತ್ತೇವೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾವೆಲ್ಲರೂ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ನೈತಿಕ ಬೆಂಬಲಕ್ಕಾಗಿ ಬಂದಿದ್ದೇವೆ. ಇಡೀ ಸಮಾಜ, ನಾವು ಅಖಂಡ ಬಂಡೆಯಂತೆ ನಿಂತಿದ್ದೇವೆ. ಕೆಲವೇ ದಿನಗಳಲ್ಲಿ ಬಾಗಲಕೋಟೆ, ಹುಬ್ಬಳ್ಳಿ ಅಥವಾ ಧಾರವಾಡ ಯಾವುದಾದರೂ ಒಂದು ಸ್ಥಳದಲ್ಲಿ ಸಮಾಜದ ಮುಖಂಡರ ಸಭೆ ಮಾಡಿ ಮುಂದಿನ ನಡೆ ಪ್ರಕಟಿಸುತ್ತೇವೆ. ಮುಂದಿನ ನಡೆ ಏನಿರಬೇಕು ಎಂಬುದರ ಬಗ್ಗೆ ಶ್ರೀಗಳೊಂದಿಗೆ ಚರ್ಚಿಸಿದ್ದೇವೆ. ಮುಂದಿನ ಸಭೆಯಲ್ಲಿಯೇ ಎಲ್ಲವನ್ನೂ ತಿಳಿಸುತ್ತೇವೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಕೂಡಲಸಂಗಮ ಯಾತ್ರಿ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಪೀಠಾಧಿಪತಿಯಾದ ನಂತರ ಸಮಾಜ ಸಂಘಟನೆ, ಹೋರಾಟ ಮಾಡಿದ್ದನ್ನು ಯಾರೂ ಪಂಚಮಸಾಲಿಗಳು ಮರೆಯುವುದಿಲ್ಲ. ಸಮಾಜದ ಶಕ್ತಿಯನ್ನು ರಾಜ್ಯ ಸರ್ಕಾರಕ್ಕೆ, ದೇಶಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಚರ್ಚೆ ಮಾಡಿಲ್ಲ. ನೈತಿಕ ಬೆಂಬಲಕ್ಕೆ ಬಂದಿದ್ದೇವೆ. ಯತ್ನಾಳ ಬರುವವರಿದ್ದರು. ಜ್ವರ ಬಂದಿದ್ದರಿಂದ ಬರಲು ಸಾಧ್ಯವಾಗಲಿಲ್ಲ ಎಂದರು.

ಸಮಾಜದ ಎಲ್ಲ ಶಾಸಕರು, ಗಣ್ಯರು ಸೇರಿಕೊಂಡು ಮುಂದಿನ ದಿನದಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ. ಜಗದ್ಗುರುಗಳಿಗೂ, ಟ್ರಸ್ಟಿಗೂ ಯಾವುದೇ ಸಂಬಂಧವಿಲ್ಲ. ಅವರನ್ನು ಹೊರಹಾಕುವ ಅಧಿಕಾರವೂ ಇಲ್ಲ. ಸಮಾಜದವರು ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಯಾವತ್ತಿಗೂ ಪ್ರಪ್ರಥಮ ಪಂಚಮಸಾಲಿ ಪೀಠದ ಜಗದ್ಗುರುಗಳಾಗಿ ಮುಂದುವರಿಯುತ್ತಾರೆ ಎಂದು ತಿಳಿಸಿದರು.

ಕೂಡಲಸಂಗಮದಲ್ಲಿ ಪರ್ಯಾಯ ಪೀಠ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಒಬ್ಬರು, ಇಬ್ಬರೂ ಕೂಡಿಕೊಂಡು ತೆಗೆದುಕೊಳ್ಳುವ ನಿರ್ಣಯ ಆಗಬಾರದು. ಆ ಕಾರಣಕ್ಕಾಗಿ ಸ್ವಲ್ಪ ದಿನದಲ್ಲಿ ಸಮಾಜದ ಮುಖಂಡರ ದೊಡ್ಡ ಸಭೆ ಕರೆಯತ್ತೇವೆ. ಸಮಾಜದ ಬಗ್ಗೆ ಕಾಳಜಿ, ಅಭಿಮಾನ ಇರುವವರು ಪಕ್ಷಾತೀತವಾಗಿ ಬರಬೇಕು ಎಂದು ಮನವಿ ಮಾಡಿದರು.

ಪಂಚಮಸಾಲಿ ಹಿಂದೂ ಪೀಠನಾ? ಲಿಂಗಾಯತ ಪೀಠವೇ ಎಂಬ ಪ್ರಶ್ನೆಗೆ, ಯಾರಿಗೂ ಶಂಕೆ ಬೇಡ. ಹಿಂದು ಎಂಬ ಶಬ್ಧ ಪರಂಪರಾಗತವಾಗಿ ಬಂದಿದೆ. ನಮ್ಮ ಧರ್ಮ ಹಿಂದೂ, ಉಪಜಾತಿ ಅವರವರ ಕಾಲಂನಲ್ಲಿ ಬೇಕಾದ್ದನ್ನು ಬರೆಸಲಿ. ಪಂಚಮಸಾಲಿ ಪೀಠ ಒಂದೇ, ಹಿಂದು ಎನ್ನುವವರು ಹಿಂದು ಅಂದುಕೊಳ್ಳಲಿ, ವೀರಶೈವ ಎನ್ನುವವರು ವೀರಶೈವ ಅಂದುಕೊಳ್ಳಲಿ. ಲಿಂಗಾಯತ ಎನ್ನುವವರು ಲಿಂಗಾಯತ ಅಂದುಕೊಳ್ಳಲಿ. ಅವರವರ ಭಕುತಿಗೆ, ಭಾವಕ್ಕೆ ಅನುಗುಣವಾಗ ಅಂದುಕೊಳ್ಳಲಿ ಎಂದು ವಿವರಿಸಿದರು.

ಶ್ರೀಗಳು ಸಮಾಜದ ಮಕ್ಕಳ ವಿದ್ಯಾಭ್ಯಾಸ, ನೌಕರಿಗಾಗಿ ಮೀಸಲಾತಿ ಕೊಡಿಸಬೇಕೆಂಬ ಸ್ಪಷ್ಟ ಉದ್ದೇಶಕ್ಕೆ ಬದ್ಧರಾಗಿದ್ದಾರೆ. ನಾವು ಬೆಂಬಲವಾಗಿ ನಿಂತಿದ್ದೇವೆ. ಮುಂದೆ ಪರಮಾತ್ಮ, ಕೂಡಲಸಂಗಮನ ಆಶೀರ್ವಾದ ಇದ್ದರೆ ರಾಜ್ಯದ ಚುಕ್ಕಾಣಿ ಹಿಡಿಯುವ ಅವಕಾಶ ಸಿಕ್ಕರೆ, ಪುನಃ ಪ್ರಯತ್ನಿಸಿ ಶ್ರೀಗಳಿಗೆ ವಿಜಯಪತಾಕೆ ಮಾಲೆ ಹಾಕಲು ನಾವೆಲ್ಲರೂ ಬದ್ಧರಿದ್ದೇವೆ ಎಂದು ತಿಳಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಿಡಿ ಬಗ್ಗೆ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮನಸಿಗೆ ಬಂದಂತೆ ಮಾತನಾಡುವುದಲ್ಲ. ಇದೇ ಸ್ವಾಮೀಜಿಯನ್ನು ಟಿಕೆಟ್‌ಗಾಗಿ ಅಡ್ಡಾಡಿಸಿದರಲ್ಲ. ಸಮಾಜದ ವ್ಯಕ್ತಿಯ ಗೌರವ ಕಳೆಯುವ ಕೆಲಸವನ್ನು ಯಾರೂ ಮಾಡಬಾರದು. ನಾವು ಯಾರ ಗೌರವ ಕಡಿಮೆ ಮಾಡಲು ಹೋಗುತ್ತೇವೆಯೋ, ಆವಾಗ ನಮ್ಮ ಗೌರವವೇ ಕಡಿಮೆ ಆಗುವುದು. ವ್ಯಕ್ತಿಗಿಂತ ಸಮಾಜ ದೊಡ್ಡದು ಎಂಬುದರನ್ನು ಅರಿಯಬೇಕು ಎಂದರು.ಪ್ರತ್ಯೇಕ ಚರ್ಚೆ:ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ಬಸವರಾಜ ಕಡಪಟ್ಟಿ, ಮಹಾಂತೇಶ ಕಡಪಟ್ಟಿ, ಅರವಿಂದ ಮಂಗಳೂರ ಮುಂತಾದವರು ಇದ್ದರು.

ಕೂಡಲಸಂಗಮ ಯಾತ್ರಿ ನಿವಾಸದ ಕೊಠಡಿಯಲ್ಲಿ ಬಸವಜಯಮೃತ್ಯುಂಜಯ ಸ್ವಾಮೀಜಿ, ಮಾಜಿ ಸಚಿವ ಸಿ.ಸಿ.ಪಾಟೀಲ, ಶಾಸಕ ಅರವಿಂದ ಬೆಲ್ಲದ, ಸಿದ್ದು ಸವದಿ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಒಂದು ಗಂಟೆಗಳ ಕಾಲ ಚರ್ಚಿಸಿದರು. ನಂತರ ಊಟ ಸವಿದು ಒಂದು ವಾಹನದಲ್ಲಿ ತೆರಳಿದರು.

ರಾಜ್ಯಮಟ್ಟದ ಭಕ್ತರ ಸಭೆಯನ್ನು ಶೀಘ್ರದಲ್ಲಿಯೇ ಕರೆಯುತ್ತೇವೆ. ಎರಡೇ ದಿನದಲ್ಲಿ ಎಂದು, ಎಲ್ಲಿ ಎಂಬುದನ್ನು ಮುಖಂಡರು ತಿಳಿಸುತ್ತಾರೆ. ಬಾಗಲಕೋಟೆಯಲ್ಲಿಯೇ ಮಾಡುವ ಉದ್ದೇಶ ಇದೆ. ಸಭೆಯ ನಂತರ ಸಮಾವೇಶ ಮಾಡುವ ಆಲೋಚನೆ ಇದೆ. ಎಲ್ಲ ಮುಖಂಡರು ಇಂದು ಬಂದು ಭಕ್ತಿಯ ಬೆಂಬಲ ನೀಡಿದ್ದಾರೆ. ಕೂಡಲಸಂಗಮದಲ್ಲಿಯೇ ಪಂಚಮಸಾಲಿ ಮೂಲ ಪೀಠ ಇರುವುದು, ಶಾಖಾ ಪೀಠವನ್ನು ಭಕ್ತರು ಎಲ್ಲಿ ಮಾಡಲು ತಿಳಿಸುತ್ತಾರೆ ಅಲ್ಲಿಯೇ ಮಾಡುತ್ತೇವೆ. ಕೂಡಲಸಂಗಮವೇ ಮೂಲ ಪೀಠ. ಸ್ವತಂತ್ರ ಪೀಠ ಶೀಘ್ರದಲ್ಲಿಯೇ ಸ್ಥಳ ನಿಗದಿ ಮಾಡುತ್ತೇವೆ.

-ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ