ಒಂದೇ ವೇದಿಕೆ ಹಂಚಿಕೊಂಡ ಕಾಂಗ್ರೆಸ್ಸಿನ ಎರಡೂ ಬಣಗಳ ಮುಖಂಡರು

2018ರ ವಿಧಾನಸಭಾ ಚುನಾವಣೆ ನಂತರ ಎರಡು ಬಣಗಳಾಗಿ ರೂಪುಗೊಂಡು ಪ್ರತ್ಯೇಕ ಚಟುವಟಿಕೆ ನಡೆಸುತ್ತಿದ್ದ ಇಲ್ಲಿಯ ಕಾಂಗ್ರೆಸ್ಸಿನ ಎರಡೂ ಬಣಗಳು ಇದೀಗ ಲೋಕಸಭಾ ಚುನಾವಣೆ ವೇಳೆ ಗುರುವಾರ ತಾಲೂಕಿನ ತೆಲಿಗಿ, ಹಲುವಾಗಲು ಮುಂತಾದೆಡೆ ನಡೆದ ಪ್ರಚಾರ ಸಭೆಯಲ್ಲಿ ಒಂದೇ ವೇದಿಕೆ ಹಂಚಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದರು.

KannadaprabhaNewsNetwork | Published : Apr 25, 2024 7:29 PM IST / Updated: Apr 26 2024, 10:39 AM IST

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: 2018ರ ವಿಧಾನಸಭಾ ಚುನಾವಣೆ ನಂತರ ಎರಡು ಬಣಗಳಾಗಿ ರೂಪುಗೊಂಡು ಪ್ರತ್ಯೇಕ ಚಟುವಟಿಕೆ ನಡೆಸುತ್ತಿದ್ದ ಇಲ್ಲಿಯ ಕಾಂಗ್ರೆಸ್ಸಿನ ಎರಡೂ ಬಣಗಳು ಇದೀಗ ಲೋಕಸಭಾ ಚುನಾವಣೆ ವೇಳೆ ಗುರುವಾರ ತಾಲೂಕಿನ ತೆಲಿಗಿ, ಹಲುವಾಗಲು ಮುಂತಾದೆಡೆ ನಡೆದ ಪ್ರಚಾರ ಸಭೆಯಲ್ಲಿ ಒಂದೇ ವೇದಿಕೆ ಹಂಚಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ಪಿ.ರವೀಂದ್ರ ಪರಾಭವಗೊಂಡು ನಂತರ ಕೆಲವೇ ದಿನಗಳಲ್ಲಿ ನಿಧನರಾದರು. ಆಗ ಅವರಿದ್ದ ಕಚೇರಿಯಲ್ಲಿ ಬಿಡಾರ ಹೂಡಿದ ಅವರ ಸಹೋದರಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾಂಗ್ರೆಸ್‌ ಸಂಘಟನೆಗೆ ಮುಂದಾದರು. ಇನ್ನೊಬ್ಬ ಸಹೋದರಿ ಎಂ.ಪಿ. ವೀಣಾ ಮಹಾಂತೇಶ ಸಹ ಆಚಾರ ಬಡಾವಣೆಯಲ್ಲಿ ಪ್ರತ್ಯೇಕ ಕಚೇರಿ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಮುಂದಾದರು.

ಇವರಿಬ್ಬರಂತೆ ಇನ್ನು 14 ಜನರು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿ ಟಿಕೆಟ್‌ ಆಕಾಂಕ್ಷಿಗಳಾದರು. ಹೀಗೆ ಒಟ್ಟು 16 ಜನರು 2023ರ ವಿಧಾನಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿಗಳಾದರು. ಒಂದು ಹಂತದಲ್ಲಿ 15 ಆಕಾಂಕ್ಷಿಗಳು ಒಂದು ಕಡೆಯಾದರೆ, ಎಂ.ಪಿ. ಲತಾ ಒಬ್ಬರೇ ಪ್ರತ್ಯೇಕವಾಗಿ ಪಕ್ಷದ ಕಾರ್ಯಕ್ರಮಗಳನ್ನು ಮಾಡುತ್ತಾ ಸಾಗಿದರು.

ಅಂತಿಮವಾಗಿ ಅರಸಿಕೇರಿ ಎನ್‌.ಕೊಟ್ರೇಶ ಪಕ್ಷದ ಅಧಿಕೃತ ಅಭ್ಯರ್ಥಿಯಾದರು. ಎಲ್ಲ ಆಕಾಂಕ್ಷಿಗಳು ಹಿಂದೆ ಸರಿದರೂ ಎಂ.ಪಿ. ಲತಾ ಮಾತ್ರ ಪಕ್ಷೇತರರಾಗಿ ಕಣಕ್ಕೆ ಧುಮಿಕಿಯೇ ಬಿಟ್ಟರು. ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಅವರ ಬೆಂಬಲಿಗರು ಪಕ್ಷದ ಅಧಿಕೃತ ಅಭ್ಯರ್ಥಿ ಕೊಟ್ರೇಶ ಅವರಿಗೆ ಸಹಜವಾಗಿ ಬೆಂಬಲಿಸಿದರು.

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಪಿ. ಲತಾಗೆ ಕಾಂಗ್ರೆಸ್ಸಿನ ಅನೇಕರು ಬೆಂಬಲಿಸಿದರು. ಈ ವೇಳೆ ಕಾಂಗ್ರೆಸ್‌ ಇಬ್ಭಾಗವಾಯಿತು. ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಪಕ್ಷೇತರ ಅಭ್ಯರ್ಥಿ ಎಂ.ಪಿ. ಲತಾ ಜಯ ಗಳಿಸಿ ಕೂಡಲೇ ಬೆಂಗಳೂರಿಗೆ ತೆರಳಿ ಪಕ್ಷದ ಸಹ ಸದಸ್ಯರಾಗಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸದಸ್ಯರಾಗಿ ಸೇರ್ಪಡೆಯಾದರು.

ಆದರೂ ಅಲ್ಲಿಂದ ಈವರೆಗೂ ಬಣ ರಾಜಕೀಯ ಹಾಗೆ ಮುಂದುವರೆದಿತ್ತು. ಅವರ ಪಾಡಿಗೆ ಅವರು ಇವರ ಪಾಡಿಗೆ ಇವರು ಇದ್ದರು. ಈಗ್ಗೆ ಸ್ವಲ್ಪ ದಿನಗಳ ಕೆಳಗೆ ಶಾಸಕಿ ಎಂ.ಪಿ. ಲತಾ ಮೊದಲಿಗೆ ಹಿರಿಯ ಮುಖಂಡ, ಮುತ್ಸದ್ಧಿ ರಾಜಕಾರಣಿ ಸಿ.ಚಂದ್ರಶೇಖರ ಭಟ್‌ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಒಂದಾಗಿ ಹೋಗಲು ಚರ್ಚಿಸಿದರು. ಆಗ ಒಗ್ಗೂಡುವಿಕೆಗೆ ಮೊದಲ ಪ್ರಯತ್ನ ಅದಾಗಿತ್ತು.

ವಿಧಾನಸಭಾ ಚುನಾವಣೆ ನಡೆದು 11 ತಿಂಗಳ ಬಳಿಕ ಲೋಕಸಭಾ ಚುನಾವಣೆ ಬಂದಾಗ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಘೋಷಿಸಿದಾಗ ಕಾಂಗ್ರೆಸ್‌ ಬಣಗಳ ಒಗ್ಗೂಡುವಿಕೆಗೆ ನಾಂದಿಯಾಯಿತು.

ಅಭ್ಯರ್ಥಿ ಡಾ.ಪ್ರಭಾ ಪತಿ, ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಎಲ್ಲರ ಬಳಿ ಮಾತನಾಡಿ ಇದೇ ಪ್ರಥಮ ಬಾರಿಗೆ ತೆಲಿಗಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಎಂ.ಪಿ. ವೀಣಾ ಒಂದೇ ವೇದಿಕೆ ಹಂಚಿಕೊಂಡರು.

ಒಟ್ಟಾಗಿ ಕೂತರೂ ಪರಸ್ಪರ ಮಾತಾಡಲಿಲ್ಲ. ಅವರವರ ಬೆಂಬಲಿಗರು ಸಹ ಒಟ್ಟಾಗಿ ಕುಳಿತು ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಿದರು.

Share this article