ದೊಡ್ಡಬಳ್ಳಾಪುರ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಕಲಿಸಿಕೊಡುತ್ತದೆ. ಯುವ ಜನತೆಯ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ವಿಜಯ ಮಾರಹನುಮಯ್ಯ ತಿಳಿಸಿದರು. ತಾಲೂಕಿನ ಎಳ್ಳುಪುರ ಗ್ರಾಮದಲ್ಲಿ ಪಿ.ಕೆ.ಬಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಸೇವಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಅನುಭವ ಕಲಿಸುತ್ತದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ಸೇವಾ ಭಾವನೆಯನ್ನು ಬೆಳೆಸಲು ಎನ್‌ಎಸ್ಎಸ್ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಹೊಂಬೇಗೌಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಕೃಷ್ಣಮೂರ್ತಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವ ಅಂಗವಾಗಿ ಪ್ರಾರಂಭವಾಯಿತು. ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸುವ ಗುರಿಯನ್ನು ರಾಷ್ಟ್ರೀಯ ಸೇವಾ ಯೋಜನೆ ಹೊಂದಿದೆ. ಪ್ರತಿ ವರ್ಷ ನಡೆಯುವ ನಡೆಯುವ ವಿಶೇಷ ಸೇವಾ ಶಿಬಿರಗಳಲ್ಲಿ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ , ಪ್ರಗತಿಪರ ಚಿಂತನೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳು ಮತ್ತು ಮಹಿಳಾ ಜಾಗೃತಿ ಮುಂತಾದ ವಿಚಾರಗಳನ್ನು ವಿದ್ಯಾರ್ಥಿಗಳು ಅರಿಯಲು ಅನುಕೂಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬಾಶೆಟ್ಟಿಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷೆ ಶಿಲ್ಪ ಮುನಿಶಂಕರ್, ಗ್ರಾಮದ ಮುಖಂಡರಾದ ಎ.ರಮೇಶ್, ಚನ್ನೇಗೌಡ, ಮಧು, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾ ಕೇಂದ್ರದ ನಿರ್ದೇಶಕ ಚಿಕ್ಕಣಪ್ಪ, ಪಿಕೆಬಿ ಕಾಲೇಜಿನ ಪ್ರಾಂಶುಪಾಲ ಎಂ.ಆನಂದ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎ.ಆರ್.ಗಂಗಾಧರೇಶ್ವರ, ಸಹಾಯಕ ಶಿಬಿರಾಧಿಕಾರಿಗಳಾದ ಕೆ.ಆರ್.ಪ್ರಸನ್ನ ಕುಮಾರ್, ಟಿ.ಪಿ.ಅಜಿತ್ ಕುಮಾರ್, ಮಂಜುನಾಥ್, ನಿಂಗರಾಜು ಕಂಬಳಿ, ಎಸ್.ನೇತ್ರಾ, ಡಿ.ಆರ್.ಗೀತಾ, ದಿವ್ಯ ಮುಂತಾದವರು ಭಾಗವಹಿಸಿದ್ದರು.
4ಕೆಡಿಬಿಪಿ4-ದೊಡ್ಡಬಳ್ಳಾಪುರ ತಾಲೂಕಿನ ಎಳ್ಳುಪುರದಲ್ಲಿ ಪಿಕೆಬಿ ಪಪೂ ಕಾಲೇಜಿನಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ನಡೆಯಿತು.