ನರಗುಂದ: ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯದ ಜತೆಗೆ ನಾಯಕತ್ವ ಗುಣ ಬೆಳೆಯುತ್ತದೆ ಎಂದು ಲಾಲ್‌ಸಾಬ್ ಅರಗಂಜಿ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ಜಗದ್ಗುರು ಶ್ರೀತೋಂಟದಾರ್ಯ ಮಠದ ಜಾತ್ರಾಮಹೋತ್ಸವದ ಅಂಗವಾಗಿ ಲಿಂ. ಗುರುಬಸವ ಮಹಾಸ್ವಾಮಿಗಳ ಸ್ಮರಣಾರ್ಥ ಗ್ರಾಮದ ವಾರಿಯರ್ಸ್ ಗೆಳೆಯರ ಬಳಗ ಹಮ್ಮಿಕೊಂಡಿದ್ದ 7ಎ ಸೈಡ್ ಮಿನಿಗ್ರೌಂಡ್ ಕ್ರಿಕೆಟ್ ಟೂರ್ನಾಮೆಂಟ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡೆಯು ಮಾನಸಿಕ ಮತ್ತು ದೈಹಿಕ ಸದೃಢತೆಗೆ ಉತ್ತಮ ಅಭ್ಯಾಸವಾಗಿದೆ. ಕ್ರಿಕೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಶಿರೋಳ ಗ್ರಾಮದ ಯುವಕರು ಸದಾ ಕ್ರೀಡೆ ಆಯೋಜಿಸಿ ಕ್ರಿಯಾಶೀಲರಾಗುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.ಸಂಕಲ್ಪ ಶೆಟ್ಟರ್ ಮಾತನಾಡಿ, ಯುವಕರು ಚಿಕ್ಕವರಾದರೂ ಅವರ ಕಾರ್ಯ ದೊಡ್ಡದು, ಇಂತಹ ಕಾರ್ಯಕ್ರಮಗಳಿಗೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಗುರುಬಸವ ಶ್ರೀಗಳ ಸ್ಮರಣಾರ್ಥ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ. ಇದು ಯುವಕರಲ್ಲಿ ಹೆಚ್ಚಿನ ಉತ್ಸಾಹ ತುಂಬುತ್ತದೆ ಎಂದರು.ಈ ಸಂದರ್ಭದಲ್ಲಿ ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು, ಶ್ರೀ ಜಗದ್ಗುರ ಯಚ್ಚರೇಶ್ವರ ಮಹಾಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರಿಗಳು, ದ್ಯಾಮಣ್ಣ ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ, ಬಸಯ್ಯ ಮಠದ, ವೀರಯ್ಯ ನಾಗಲೋಟಿಮಠ, ಶಿವಾನಂದ ಬಡಿಗೇರ ಸೇರಿದಂತೆ ಶಿರೋಳ ಲೆಜೆಂಡ್ಸ್ ಟೀಂ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
ಸತತ ಮೂರು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಮೊದಲ ಬಹುಮಾನ ಎಸ್.ಕೆ.ಪಿ.ಯು ಹೊಳೆಆಲೂರು ತಂಡ ಪಡೆಯಿತು. ವೀರಕೇಸರಿ ವಾಸನ ಎರಡನೇ ಬಹುಮಾನ ಪಡೆದರೆ, ಶ್ರೀಮಾರುತೇಶ್ವರ ಬೂದಿಹಾಳ ತಂಡ ಮೂರನೇ ಬಹುಮಾನ ಪಡೆಯಿತು. ಗಿರೀಶಗೌಡ ನವಲಗುಂದ ಉತ್ತಮ ಬಾಲರ್, ರಾಜು ಉತ್ತಮ ಬ್ಯಾಟ್ಸ್‌ಮನ್, ಉತ್ತಮ ತಂಡ ಪ್ರಶಸ್ತಿಯನ್ನು ಶಿರೋಳ ಲೆಜೆಂಡ್ಸ್ ತಂಡ ಪಡೆದುಕೊಂಡಿತು.