ಶಿವಾನಂದ ಗೊಂಬಿ
ಸೋರುವ ಕಟ್ಟಡ, ಯಾವಾಗ ತಲೆ ಮೇಲೆ ಬೀಳುತ್ತೋ ಎಂಬ ಆತಂಕ, ಮುರಿದ ಟೇಬಲ್-ಕುರ್ಚಿ, ಗಾಜಿಲ್ಲದ ಕಿಟಕಿ, ನಿರ್ವಹಣೆಯಿಲ್ಲದೇ ದುರ್ನಾತ ಬೀರುತ್ತಿರುವ ಶೌಚಾಲಯ..!
ಇವು ತಾರಿಹಾಳದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಕಂಡು ಬರುವ ದೃಶ್ಯಗಳಿವು. 1986ರಲ್ಲಿ ಖಾಸಗಿ ಸಂಸ್ಥೆಯಾಗಿ ಆರಂಭವಾದ ತಾರಿಹಾಳ ಡಿಪ್ಲೊಮಾ ಕಾಲೇಜ್ 2001ರಲ್ಲಿ ಅನುದಾನಕ್ಕೊಳಪಟ್ಟಿತು. 2010ರಲ್ಲಿ ಸರ್ಕಾರ ತನ್ನ ವಶಕ್ಕೆ ಪಡೆದು ಸರ್ಕಾರಿ ಪಾಲಿಟೆಕ್ನಿಕ್ ಎಂದು ಘೋಷಿಸಿತು. ಆದರೆ, 2019ರ ವರೆಗೂ ಹಸ್ತಾಂತರ ಮಾಡಿಕೊಂಡಿರಲಿಲ್ಲ. ಬಳಿಕ ಹಸ್ತಾಂತರ ಮಾಡಿಕೊಂಡರೂ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.ಮೊದಲಿಗೆ ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್, ಎಲೆಕ್ಟ್ರಾನಿಕ್ಸ್ ಇನಸ್ಟ್ರುಮೆಂಟ್ ಆ್ಯಂಡ್ ಕಂಟ್ರೋಲ್, ಮೆಕಾನಿಕಲ್, ಇನ್‌ರ್ಪಾಮೇಷನ್ ಸೈನ್ಸ್, ಮೆಕಾಟ್ರಾನಿಕ್ಸ್ ಹೀಗೆ ಏಳು ಕೋರ್ಸ್‌ಗಳಿದ್ದು ಇದರಲ್ಲಿ ಇದೀಗ ಸಿವಿಲ್, ಕಂಪ್ಯೂಟರ್ಸ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಲೆಕ್ಟ್ರಾನಿಕ್ಸ್ ಇನ್‌ಸ್ಟ್ರುಮೆಂಟ್ ಆ್ಯಂಡ್ ಕಂಟ್ರೋಲ್ ಕೋರ್ಸ್ ಇಲ್ಲಿವೆ. ಪ್ರತಿ ಕೋರ್ಸ್‌ಗೆ 35 ವಿದ್ಯಾರ್ಥಿಗಳಂತೆ 140 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು ಫಲಿತಾಂಶವೂ ಶೇ.92ರಷ್ಟಿದೆ. ಆದರೆ, ಸೌಲಭ್ಯಗಳು ಮಾತ್ರ ಶೂನ್ಯ.
ಪ್ರತಿ ವಿಷಯಗಳೂ ಇದೀಗ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ಕೋರ್ಸ್‌ಗಳಿವೆ. ಕನಿಷ್ಠವೆಂದರೂ 150 ಅಡ್ವಾನ್ಸಡ್ ಕಂಪ್ಯೂಟರ್ ಹೊಂದಿರುವ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಬೇಕು. ಆದರೆ, ಇಲ್ಲಿರುವುದು 20 ಕಂಪ್ಯೂಟರ್ ಮಾತ್ರ. ಇನ್ನು ಕಾಲೇಜ್ ಕಟ್ಟಡ ಸುಣ್ಣ-ಬಣ್ಣ ಕಾಣದೇ ಅದೆಷ್ಟೋ ವರ್ಷಗಳೇ ಕಳೆದಿವೆ. ಕಟ್ಟಡದ ಒಂದು ಭಾಗವಂತೂ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಮಳೆಗೆ ಸ್ಲ್ಯಾಬ್ ಕೆಳಕ್ಕೆ ಕಳಚುತ್ತಿದೆ. ನಿರಂತರವಾಗಿ ಸೋರುತ್ತಿದ್ದು ಪಿಲ್ಲರ್ ಬಿರುಕು ಬಿಟ್ಟಿವೆ. ಎರಡ್ಮೂರು ಕೊಠಡಿಗಳ ಪರಿಸ್ಥಿತಿ ಇದ್ದಾಗಿದ್ದರೂ ಉಳಿದ ಕೊಠಡಿಗಳು ಇದರ ಹೊರತಾಗಿಲ್ಲ. ಎಲ್ಲ ಕೊಠಡಿಗಳ ಕಿಟಕಿಗಳ ಗಾಜು ಒಡೆದಿವೆ. ವಿದ್ಯುತ್ ವೈರ್ ಜೋತಾಡುತ್ತಿದ್ದು, ಯಾರಿಗೆ ಯಾವಾಗ ವಿದ್ಯುತ್ ಸ್ಪರ್ಶವಾಗುತ್ತದೆಯೋ ಎಂಬುದು ತಿಳಿಯದಂತಾಗಿದೆ.
ಕಾಲೇಜ್‌ನ ಸುತ್ತಲೂ ಕಾಂಪೌಂಡ್ ಇಲ್ಲದ ಕಾರಣ ಕಾಲೇಜ್ ಮುಗಿಯುತ್ತಿದ್ದಂತೆ ಕುಡುಕರ ಹಾವಳಿ ವಿಪರೀತವಾಗಿದೆ. ನಿರ್ಜನ ಪ್ರದೇಶದಲ್ಲಿರುವ ಈ ಕಟ್ಟಡದ ಖಾಲಿ ಜಾಗೆ "ಒಪನ್ ಬಾರ್ " ಆಗಿದ್ದು ಇದಕ್ಕೆ ಕುರುಹು ಎಂಬಂತೆ ಅಲ್ಲಲ್ಲಿ ಮದ್ಯದ ಖಾಲಿ ಬಾಟಲಿ, ಟೆಟ್ರಾ ಪಾಕೆಟ್ ಕಣ್ಣಿಗೆ ರಾಚುತ್ತವೆ.
ಸರ್ಕಾರ ಕಾಲೇಜ್‌ನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಷ್ಟೇ ಬಂದಿದೆ. ಆದರೆ, ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂಬುದನ್ನೇ ಮರೆತುಬಿಟ್ಟಿದೆ. ನಿರ್ವಹಣೆಗೆ ನಯಾಪೈಸೆ ಕೂಡ ಬಂದಿಲ್ಲ ಎಂಬುದು ಇಲ್ಲಿನ ಸಿಬ್ಬಂದಿಗಳ ಅಳಲು.