ಕನ್ನಡಪ್ರಭ ವಾರ್ತೆ ತಿಪಟೂರು
ಗಾಂಧಿನಗರದಲ್ಲಿರುವ ನೀರು ಶುದ್ಧೀಕರಣ ಘಟಕದಿಂದ ರೈಲ್ವೆ ಅಂಡರ್ ಪಾಸ್ ಮೇಲ್ಬಾಗ ಕೆ.ಆರ್.ಬಡಾವಣೆಗೆ ನೀರು ಸರಬರಾಜು ಮಾಡಲು ಪೈಪ್ ಅಳವಡಿಸಲಾಗಿರುವ ಪೈಪ್‌ನಿಂದ ನೀರು ಸೋರಿಕೆಯಾಗಿ ಅಂಡರ್‌ಪಾಸ್ ಕೆಳಭಾಗದಲ್ಲಿ ಕೆರೆಯಂತಾಗಿದೆ. ನೀರಿನ ಪೈಪ್ ಸೋರಿಕೆಯಿಂದ ವಾಹನ ಸವಾರರಿಗೆ ಓಡಾಡಲು ಸಾಕಷ್ಟು ತೊಂದೆಯಾಗುತ್ತಿದೆ. ಈ ಬಗ್ಗೆ ಹಲವು ದಿನಗಳಿಂದಲೂ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಸಾರ್ವಜನಿಕರ ಬಹಳವರ್ಷಗಳ ಬೇಡಿಕೆಯಿಂದ ಕೋಟ್ಯಾಂತರ ರು. ಖರ್ಚು ಮಾಡಿ ರೈಲ್ವೆ ಇಲಾಖೆ ಅಂಡರ್ ಪಾಸ್ ನಿರ್ಮಿಸಿದ್ದರೂ ಅಂಡರ್‌ಪಾಸ್‌ನಲ್ಲಿ ತೆರಳಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಅಂಡರ್‌ಪಾಸ್ ಮೂಲಕ ಸುಕ್ಷೇತ್ರಗಳಾದ ಕೆರೆಗೋಡಿ-ರಂಗಾಪುರ, ದಸರೀಘಟ್ಟ ಸೇರಿದಂತೆ ಹಲವಾರು ಹಳ್ಳಿಗಳಿಗೆ ಸಾವಿರಾರು ಜನರು, ವಾಹನಗಳು ಓಡಾಡುತ್ತವೆ. ಎಪಿಎಂಸಿ, ಗಾಂಧಿನಗರ ಬಾಗದ ಬಡಾವಣೆಗಳ ಜನರು ಸಹ ಇದೇ ರಸ್ತೆಯನ್ನು ಅವಲಂಭಿಸಿದ್ದು ನೀರು, ಕೆಸರು ತುಂಬಿರುವುದರಿಂದ ತೊಂದರೆಯಾಗಿದೆ. ಈ ಬಗ್ಗೆ ನಗರಸಭೆ ಗಮನಕ್ಕೆ ತಂದಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನೀರಿನ ಪೈಪ್ ರಿಪೇರಿಯಾಗಿಲ್ಲ. ಹಾಗಾಗಿ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಿತ್ಯ ಪೋಲಾಗುತ್ತಿರುವ ನೀರನ್ನು ಉಳಿಸುವ ಮೂಲಕ ಅಂಡರ್ ಪಾಸ್‌ನಲ್ಲಿ ಓಡಾಡುವವರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತ ಟೈಲರ್ ಟಿ.ಎಸ್. ಹರೀಶ್ ಒತ್ತಾಯಿಸಿದ್ದಾರೆ.