ಕೌಶಲ್ಯ ಕಲಿತು ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಿ

KannadaprabhaNewsNetwork | Published : Jul 14, 2024 1:39 AM

ಸಾರಾಂಶ

ಚಾಮರಾಜನಗರ ತಾಲೂಕಿನ ಮುನೇಶ್ವರ ಕಾಲೋನಿಯಲ್ಲಿ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಾಂಬಾರು ಮಿಶ್ರಣಗಳ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಕುರಿತಾದ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕೌಶಲ್ಯ ಕಲಿತು ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗುವಂತೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್‌.ಯೋಗೇಶ್‌ ಸಲಹೆ ನೀಡಿದರು.

ಚಾಮರಾಜನಗರ ತಾಲೂಕಿನ ಬುಡಕಟ್ಟು ಗ್ರಾಮ ಮುನೇಶ್ವರ ಕಾಲೋನಿಯಲ್ಲಿ ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಮತ್ತು ಇನ್ನರ್ ವ್ಹೀಲ್ ಸಂಘ, ಎಚ್‌ಡಿಆರ್‌ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಾಂಬಾರು ಮಿಶ್ರಣಗಳ ತಯಾರಿಕೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಕುರಿತಾದ ಕೌಶಲ್ಯ ತರಬೇತಿಯನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸಲು ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ಪರಿಕರಗಳನ್ನು ನೀಡುವುದರ ಜೊತೆಗೆ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳು, ಸಾಂಬಾರು ಪುಡಿ ಮತ್ತು ಇನ್ನಿತರ ಆಹಾರ ಮಿಶ್ರಣಗಳ ತಯಾರಿಕೆಯ ಕುರಿತಾದ ತಾಂತ್ರಿಕ ಮಾಹಿತಿಯನ್ನು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳ ಮೂಲಕ ತಿಳಿಸಿಕೊಡಲಾಗುವುದು ಎಂದರು. ರೈತರು ಈ ಆಯಾಮವನ್ನು ಬಳಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಕರೆ ನೀಡಿದರು.

ಇನ್ನರ್ ವೀಲ್ ಸಂಸ್ಥೆ ಬೆಂಗಳೂರಿನ ಜಿಲ್ಲಾ ಘಟಕದ ಖಜಾಂಚಿ ವೀಣಾ ಪ್ರಮೋದ್‌ ಅವರು ಇನ್ನರ್ ವ್ಹೀಲ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ವಿವರಣೆ ನೀಡಿ ಮಹಿಳಾ ಸಬಲೀಕರಣ ದೃಷ್ಟಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ಉತ್ತೇಜನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ದ್ವಿತೀಯ ಕೃಷಿಗೆ ಪ್ರಸ್ತುತ ಹೆಚ್ಚಿನ ಆದ್ಯತೆ ಹಾಗೂ ಮೌಲ್ಯ ಇರುವುದರಿಂದ ಈ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿಕೊಟ್ಟರು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಉಷಾ ರವೀಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸಿರಿಧಾನ್ಯ ಬೇಸಾಯ ಮಾಡುತ್ತಿರುವ ರೈತರು ಉತ್ಪನ್ನಗಳ ಮೌಲ್ಯ ಹೆಚ್ಚಿಸಿಕೊಳ್ಳಲು ಮೌಲ್ಯವರ್ಧನೆ ಕೈಗೊಂಡು, ಮಾರುಕಟ್ಟೆಯ ಸದ್ಭಳಕೆ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಿಕೊಳ್ಳಬೇಕೆಂದು ತಿಳಿಸಿದರು.

ಇದಕ್ಕಾಗಿ ಯೋಜನೆಯಡಿ ಗ್ರಾಮದಲ್ಲಿ ಸಂಸ್ಕರಣ ಘಟಕ ಸ್ಥಾಪಿಸಲಾಗುತ್ತಿದ್ದು, ಹಿಟ್ಟಿನ ಗಿರಣಿ ಮತ್ತು ಅಳವಡಿಕೆಗೆ ಬೇಕಾದ ಮೋಟಾರು, ತೂಕ ಮಾಪನ ಯಂತ್ರ, ಸಂಸ್ಕರಣಾ ಉಪಕರಣಗಳು ಇವುಗಳನ್ನು ಅಳವಡಿಸಿಕೊಡಲಾಗುತ್ತದೆ. ಪ್ರಸ್ತುತ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರ ಸ್ವಸಹಾಯ ಗುಂಪು ಇದನ್ನು ಲಾಭದಾಯಕವಾಗಿ ನಿರ್ವಹಿಸಬೇಕು, ಇದಕ್ಕೆ ಬೇಕಾದ ತಾಂತ್ರಿಕ ಮತ್ತು ಮಾರುಕಟ್ಟೆ ಬೆಂಬಲವನ್ನು ಒದಗಿಸಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಮಾತನಾಡಿ, ಪ್ರಸ್ತುತ ಬೆಳೆ ಉತ್ಪಾದನೆ ಮಾಡುತ್ತಿದ್ದು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಈ ಯೋಜನೆ ಮುಖಾಂತರ ನೀಡುವ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮಗಳಲ್ಲಿ ಉತ್ತಮ ಜ್ಞಾನವನ್ನು ಗ್ರಹಿಸಿಕೊಂಡು, ಈ ಸಂಸ್ಕರಣ ಘಟಕವನ್ನು ಲಾಭದಾಯಕವಾಗಿ ನಿರ್ವಹಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಗೃಹವಿಜ್ಞಾನಿ ಡಾ.ಜೆ. ದೀಪ, ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಚಂದ್ರಿಕಾ, ಗೀತಾ, ಸೌಮ್ಯ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಇನ್ನಿತರ ಆಹಾರ ಮಿಶ್ರಣಗಳ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು. ಮುನೇಶ್ವರ ಕಾಲೋನಿಯ ಪ್ರಗತಿಪರ ರೈತ ಶಿವರಾಮೇಗೌಡ, ನಾಗ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು ಗ್ರಾಮದ ರೈತ ಮಹಿಳೆಯರು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.

Share this article