ಬಸವಣ್ಣ ಜಯಂತಿ । ಶರಣ ಸಾಹಿತ್ಯ ಪರಿಷತ್ ಆಯೋಜನೆ । ೧೦೮ ಗಾಯಕರಿಂದ ಸಾಮೂಹಿ ವಚನ ಗಾಯನ
ಈ ನಾಡಿನ ಪ್ರತಿಯೊಬ್ಬರು ಶರಣರ ಬದುಕಿನ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಜತೆಗೆ ಅವರ ವಚನಗಳನ್ನು ಕಲಿತು ಇತರರಿಗೆ ಪ್ರೇರೇಪಿಸಬೇಕೆಂದು ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿಯವರು ಹೇಳಿದರು.
ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಹಾಗೂ ಬಸವಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣನವರ ಜಯಂತ್ಯುತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.ಗುಡಿಗುಂಡಾರಗಳನ್ನು ವಿರೋಧಿಸಿದ ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ನೀಡಿ ದೇಹವನ್ನೇ ದೇಗುಲವನ್ನಾಗಿಸಿದರು. ಇಂತಹ ಶರಣ ಧರ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಶರಣರ ವಚನಗಳು ಪ್ರತಿಯೊಬ್ಬರಿಗೂ ದಾರಿ ದೀಪಗಳಾಗಿವೆ. ನಾವುಗಳೇ ವಚನಗಳನ್ನು ಕಲಿತು ಪಾಲಿಸದಿದ್ದರೆ ಬೇರೆ ಯಾರು ಕಲಿಯುತ್ತಾರೆಂದು ಪ್ರಶ್ನಿಸಿದರು.
ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಸಂಘರ್ಷ ಉಂಟಾಗಿ ಆಶಾಂತಿ ತಾಂಡವಾಡುತ್ತಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಇಲ್ಲದೆ ಜೀವನ ನಲುಗುತ್ತಿದೆ. ಬಸವಣ್ಣನವರು ಸಮಾಜದಲ್ಲಿನ ತಳ ಸಮುದಾಯಗಳ ಬಗ್ಗೆ, ಅವರ ನೋವು, ಸಂಕಟಗಳ ಬಗ್ಗೆ ಅರಿತಷ್ಟು ಅಂಬೇಡ್ಕರ್ ಹೊರತು ಪಡಿಸಿದರೆ ಬೇರೆ ಯಾರೂ ಅರಿಯಲಿಲ್ಲ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಶ್ರೀ ಬಸವೇಶ್ವರ ಧರ್ಮ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
ಮಹಿಳಾ ಸದಸ್ಯೆಯರು ವಚನ ಗಾಯನ ಮಾಡಿದರು. ಶಂಕರ ಮೂರ್ತಿ ಸ್ವಾಗತಿಸಿದರು. ಎಚ್.ಎನ್.ಮಹಾರುದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಿರಣ್ ಅತಿಥಿ ಪರಿಚಯ ನಡೆಸಿ ಕೊಟ್ಟರು. ನಂದಿನಿ ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿ, ಕತ್ತಲಗೆರೆ ತಿಮ್ಮಪ್ಪ ವಂದಿಸಿದರು.