ಕನ್ನಡಪ್ರಭ ವಾರ್ತೆ ವಿಜಯಪುರ
ಎಲ್ಲ ವೈದ್ಯ ವಿದ್ಯಾರ್ಥಿಗಳು ಕನ್ನಡದಲ್ಲಿ ರೋಗಿಗಳ ಜೊತೆ ಮಾತನಾಡುವ ಕಲೆ ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದ್ದು, ಸಂವಹನ ಕಲೆ ರೂಢಿಸಿಕೊಂಡರೇ ರೋಗಿಗಳ ಜೊತೆ ಪ್ರೀತಿ ಗಳಿಸಲು ಸಾಧ್ಯ ಎಂದು ಎ.ವಿ.ಎಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಪಾಟೀಲ ಹೇಳಿದರು.ಕನ್ನಡ ರಾಜ್ಯೋತ್ಸವದ ನಿಮಿತ್ತ ನಗರದ ಬಿಎಲ್‌ಡಿ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಕನ್ನಡ ಧ್ವಜಾರೋಹಣ ಹಾಗೂ ತಾಯಿ ಭುವನೇಶ್ವರಿ ಪೂಜೆ ನೆರವೇರಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಅನ್ಯ ಭಾಷೆ ಹಾಗೂ ಭಾಷಿಗರಿಗೆ ಗೌರವ ಕೊಡುವುದು ನಮ್ಮೆ ಕನ್ನಡಿಗರ ಹೆಮ್ಮೆ. ಕನ್ನಡ ನಾಡು, ನುಡಿ, ಜಲ ಸೇರಿದಂತೆ ಕನ್ನಡದ ಸಂಸ್ಕೃತಿಯನ್ನು ನಾವೆಲ್ಲರೂ ಕಾಪಿಟ್ಟುಕೊಳ್ಳುವ ಮೂಲಕ ಆ ಗುರುತರ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.ಕನ್ನಡ ಭಾಷೆ, ನುಡಿ ವಿದ್ಯಾರ್ಥಿಗಳಲ್ಲಿ ಹಾಸು ಹೊಕ್ಕಾಗಬೇಕು. ಹಾಗೆಯೇ ಸ್ಪಷ್ಟ ಭಾಷೆ ಹಾಗೂ ನುಡಿ ರೂಢಿಸಿಕೊಳ್ಳುವ ಮೂಲಕ ಆ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ಅನ್ನುವಂತೆ ಹೊರ ರಾಜ್ಯದಿಂದ ವಿದ್ಯಾರ್ಥಿಗಳು ಕಲಿಯಲು ಬಂದರೂ ಸಹ ಐಕ್ಯತೆಯ ಮನೋಭಾವನೆ, ಮಂತ್ರದೊಂದಿಗೆ ಸಹಕಾರ ಹಾಗೂ ಸಹಬಾಳ್ವೆ ನಡೆಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ತಿಳಿಸಿದರು.ಕಾಲೇಜು ವಾತಾವರಣದಲ್ಲಿ ಯಾವುದೇ ಭಾಷಾ ಸಮಸ್ಯೆ ಅಥವಾ ಧರ್ಮೀಯ ಸಮಸ್ಯೆಗಳಾಗಲಿ ಕಂಡು ಬರದೇ ನಾವೆಲ್ಲರು ಸಾಮರಸ್ಯದಿಂದ ಒಂದುಗೂಡಿ ಕೆಲಸ ಮಾಡುತ್ತಿರುವುದು ನನಗೂ ಸೇರಿದಂತೆ ಎಲ್ಲರಿಗೂ ಸಂತೋಷ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚು ಮಾಡುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಈಗಾಗಲೇ ಅಚ್ಚಕನ್ನಡ, ಹಳೆಗನ್ನಡದಂತ ಕನ್ನಡ ಭಾಷೆಯ ವಿವಿಧತೆಗಳು ಜನಮಾನಸದಿಂದ ಅಳಿದುಹೋಗಿವೆ. ನಾವೆಲ್ಲ ಹಳೆಗನ್ನಡ ಪದ್ಯಗಳನ್ನೆಲ್ಲ ಕಲಿತ್ತಿದ್ದೇವೆ. ಅದರ ಸೊಗಡನ್ನು ಅನುಭವಿಸಿದ್ದೇವೆ. ಆದರೆ, ಇಂದಿನ ಮಕ್ಕಳು ಅಂತ ಹಳಗನ್ನಡ ಭಾಷೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಅವುಗಳಿಗೆ ಪುನರ್‌ಜೀವನ ಕೊಡಬೇಕಾಗಿದೆ ಎಂದು ಸಲಹೆ ನೀಡಿದರು.ಕೇವಲ ಪಠ್ಯವನ್ನಷ್ಟೇ ಪಾಠ ಮಾಡದೇ, ಕೆಲವು ಸಾಹಿತ್ಯಿಕ ಆ ಒಳವುಗಳನ್ನು ಹಾಗೂ ಹರುವುಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ನಮ್ಮ ಜವಾಬ್ದಾರಿ ಕೂಡ ಅಷ್ಟೇ ನಮ್ಮೆಲ್ಲರಿಗೆ ಮುಖ್ಯವಾಗಿದೆ. ಹಳೆಗನ್ನಡದ ಸೊತ್ತನ್ನು, ಸೊಲ್ಲನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೆಲಸ ನಮ್ಮಿಂದಾಗಬೇಕಾಗಿದೆ. ಕನ್ನಡ ಸಾರಸ್ವತ ಲೋಕದ ಅನಾವರಣವನ್ನು ನಮ್ಮ ಮಕ್ಕಳಿಗೆ ಆಗಬೇಕಾಗಿರುವುದು ಅತ್ಯಂತ ಜರುತ್ತತಾಗಿದೆ. ಆದ್ದರಿಂದಲೇ ಕೆಲವು ಓದಬೇಕಾದಂತ ಅತ್ಯಂತ ಮುಖ್ಯ ಕನ್ನಡ ಸಾಹಿತ್ಯ ಲೋಕದ ಪುಸ್ತಕಗಳನ್ನು ನಮ್ಮ ಗ್ರಂಥಾಲಯಕ್ಕೆ ತರಿಸುವಂತ ಕೆಲಸ ಪ್ರಗತಿಯಲ್ಲಿದ್ದು, ಹಿರಿಯ ಸಾಹಿತ್ಯಿಗಳ ಪುಸ್ತಕಗಳನ್ನು ಲಭ್ಯ ಇರುವಂತೆ ನೋಡಿಕೊಳ್ಳುವುದಲ್ಲದೇ ನಾವೂ ಕೂಡ ಓದುದ ಹವ್ಯಾಸವನ್ನು ಬೆಳೆಸಿಕೊಳ್ಳಲು ಸಂಕಲ್ಪ ಮಾಡಿದ್ದೇವೆ ಎಂದು ವಿವರಿಸಿದರು.ಈ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟ ಸಂಸ್ಥೆಯ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ ಅವರ ಸಹಕಾರವನ್ನು ಸ್ಮರಿಸಿ, ಮುಂಬರುವ ದಿನಗಳಲ್ಲಿ ನಮ್ಮ ವಿದ್ಯಾಲಯದ ವತಿಯಿಂದ ನಮ್ಮ ನಡೆ ಆಯುರ್ವೇದದ ಕಡೆ ಕಾರ್ಯಕ್ರಮ ನಡೆಸಲಾಗುವುದು ಎಂದು ಘೋಷಣೆ ಮಾಡಿದರು.ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗ, ಸಬಲಾ ಘಟಕದ ಪದಾಧಿಕಾರಿಗಳಾದ ಡಾ.ವಿಜಯಲಕ್ಷ್ಮೀ ಬೆನಕಟ್ಟಿ, ಡಾ.ಅಶ್ವಿನಿ ನಿಂಬಾಳ, ಉಪಪ್ರಾಚಾರ್ಯ ಡಾ.ಶಶಿಧರ ನಾಯಕ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ ಕಡ್ಲಿಮಟ್ಟಿ, ಹಿರಿಯ ಪ್ರಾಧ್ಯಾಪಕರಾದ ಡಾ.ದರ್ಶನ ಧರಿ, ಡಾ.ಕೆ.ಎ.ಪಾಟೀಲ, ಡಾ.ಉ.ಮಾ.ಪಾಟೀಲ, ಡಾ.ಸತೀಶ ಪಾಟೀಲ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಭೂಮಿಕಾ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಕಲಿಸುವ ಸಂಕಲ್ಪಕ್ಕೆ ತಿಂಗಳಲ್ಲಿ ೨ ಬಾರಿ ಕನ್ನಡ ತರಗತಿ
ಸ್ವಾವಲಂಬಿ ಸಬಲಾ ಕಾರ್ಯಕ್ರಮದಲ್ಲಿ ಎಲ್ಲ ಮಹಿಳಾ ಸಿಬ್ಬಂದಿಗೆ ಇರುವ ಕೆಲಸದ ಜೊತೆ ರುಡ್‌ಸೆಟ್ ನಂತಹ ಸಂಸ್ಥೆ ಮೂಲಕ ಕರಕುಶಲ ತರಬೇತಿ ನೀಡಿ ಮಹಿಳಾ ನೌಕರರು ತಮ್ಮದೇ ಆರ್ಥಿಕ ಸಬಲತೆ ಹೊಂದಲು ಸಹಕಾರಿಯಾಗುವಂತೆ ಮಾಡುವುದು ಉದ್ದೇಶವನ್ನು ಬಿಎಲ್‌ಡಿ ಸಂಸ್ಥೆ ಹೊಂದಿದೆ.ಮಹಿಳಾ ಸಬಲೀಕರಣ ಘಟಕವು ಸಬಲೀಕರಣಗೊಳ್ಳಲು ಹಾಗೂ ಕಾಲೇಜಿನ ಆವರಣದಲ್ಲಿ ಡಿ ಗ್ರೂಪ್‌ನ ಎಲ್ಲ ನೌಕರವರ್ಗ ಸಶಕ್ತವಾಗಿ ಬರೆಯಲು ಬರುವಂತೆ ಸಾಕ್ಷರತಾ ಸಬಲ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಈ ಕಾರ್ಯಕ್ರಮದ ಅಡಿಯಲ್ಲಿ ತಿಂಗಳಲ್ಲಿ ೨ ಬಾರಿ ಕನ್ನಡ ತರಗತಿಗಳನ್ನು ನಡೆಸಿ ಓದಲು, ಬರೆಯಲು ಸಶಕ್ತರನ್ನಾಗಿ ಮಾಡುವುದು ಸೇರಿದಂತೆ ಮುಂದಿನ ನವೆಂಬರ್ 1ಕ್ಕೆ ಕನ್ನಡ ಓದಲು, ಬರೆಯಲು ಬಾರದವರಿಗೆ ಕನ್ನಡ ಕಲಿಸುವ ಸಂಕಲ್ಪ ಮಾಡಲಾಯಿತು.
ಸಾಕ್ಷರ ಸಬಲಾ, ಸ್ವಾವಲಂಬಿ ಸಬಲಾ ಎಂಬ ಕಾರ್ಯಕ್ರಮ ಮೂಲಕ ನಮ್ಮ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿ ಗ್ರುಪ್ ನೌಕರರಿಗೆ ಅಕ್ಷರ ನಿರರ್ಗಳವಾಗಿ ಓದಲು ಬಾರದೇ ಇರುವಂತವರಿಗೆ, ಬರೆಯಲು ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವಂತವರಿಗೆ ಕನ್ನಡ ಅಕ್ಷರ ಕಲಿಸುವ ಕೆಲ ಕಾರ್ಯಕ್ರಮಗಳನ್ನು ಹಾಕಿಕೊಂಡು ಈಗ ಚಾಲನೆ ನೀಡಲಾಗಿದೆ. ತಿಂಗಳಲ್ಲಿ 2 ಬಾರಿಯಾದರೂ ಕನ್ನಡ ಕಲಿಸಲು ನಾವೆಲ್ಲರೂ ಪ್ರಯತ್ನಿಸೋಣ. ಬರಿ ಕಾಗದ ಹಾಗೂ ಕಾರ್ಯಕ್ರಮಕ್ಕೆ ಮಾತ್ರ ಸಿಮೀತವಾಗದೇ ಕಾರ್ಯರೂಪಕ್ಕೆ ಜಾರಿಗೆ ತರುವಂತೆ ನೋಡಿಕೊಳ್ಳೋಣ.-ಡಾ.ಅಶೋಕ ಪಾಟೀಲ,
ಪ್ರಾಚಾರ್ಯರು, ಎ.ವಿ.ಎಸ್ ಆಯುರ್ವೇದ ಕಾಲೇಜು ವಿಜಯಪುರ.