ಕನ್ನಡಪ್ರಭ ವಾರ್ತೆ ತಾಳಿಕೋಟೆ
ತಾಳಿಕೋಟೆ ತಾಲೂಕಿನಲ್ಲಿ ಕನ್ನಡ ಕಂಪು ಹಚ್ಚು ಹಸಿರಾಗಿದೆ. ಕನ್ನಡದ ಅಕ್ಷರದ ಜೊತೆಗೆ ಅಂಕಿ ಸಂಖ್ಯೆಗಳನ್ನು ಉಪಯೋಗಿಸುತ್ತಿರುವುದು ತಾಳಿಕೋಟೆ ನಗರದಲ್ಲಿ ಕಾಣಬಹುದಾಗಿದೆ. ಅಂತಹ ಅಪ್ಪಟ ಕನ್ನಡಿಗರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ತಾಲೂಕಾಡಳಿತ ಮಾಡುತ್ತಿದೆ ಎಂದು ತಹಸೀಲ್ದಾರ್ ಡಾ.ವಿನಯಾ ಹೂಗಾರ ಹೇಳಿದರು.ತಾಲೂಕಾಡಳಿತ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ, ಕನ್ನಡ ಅಭಿಮಾನಿಗಳ ನೇತೃತ್ವದಲ್ಲಿ ಕನ್ನಡ ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಕನ್ನಡ ನಾಡಿನ ವೈಭವ ಕುರಿತು ಎಷ್ಟು ಹೊಗಳಿದರೂ ಸಾಲದು ಕರ್ನಾಟಕದ ಇತಿಹಾಸವನ್ನು ಓದಿ ಅರಿತುಕೊಳ್ಳಬೇಕಾಗಿದೆ ಎಂದರು.ಉಪನ್ಯಾಸಕ ಡಾ.ಎ.ಬಿ.ಇರಾಜ ಮಾತನಾಡಿ, ಕರ್ನಾಟಕದ ನೆಲ ನಾಲ್ಕು ಭಾಗಗಳಾಗಿ ಒಳಗೊಂಡಿತ್ತು, ಕಾವೇರಿಯಿಂದ ಗೋದಾವರಿವರೆಗೆ ಇತಿಹಾಸ ಪರಂಪರೆ ಹೊಂದಿದ ಈ ನಾಡು ನಾಟ್ಯ ಪರಂಪರೆ ವಚನ ಸಾಹಿತ್ಯ ಶಿಲ್ಪ ಕಲೆಯೊಂದಿಗೆ ತನ್ನ ಪರಂಪರೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ಈ ವೇಳೆ ಎಸ್ಎಸ್ಎಲ್ಸಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ೩೯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಭುವನೇಶ್ವರಿ ದೇವಿ ಭಾವಚಿತ್ರದ ಭವ್ಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ತಾಪಂ ಇಒ ಅನಸೂಯಾ ಚಲವಾದಿ, ಪಿಎಸ್‌ಐ ಜ್ಯೋತಿ ಖೋತ್, ಪಿಎಸ್‌ಐ ಎಸ್.ಎಂ.ಪಡಶೆಟ್ಟಿ, ಪುರಸಭಾ ಅಧ್ಯಕ್ಷೆ ಜುಬೇದಾ ಜಮಾದಾರ, ಉಪಾಧ್ಯಕ್ಷೆ ಗೌರಮ್ಮ ಕುಂಬಾರ, ಮುಖ್ಯಾಧಿಕಾರಿ ವಸಂತ ಪವಾರ, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ, ಉಪಸ್ಥಿತರಿದ್ದರು. ಸಿಆರ್‌ಸಿ ರಾಜು ವಿಜಾಪೂರ, ಶಿಕ್ಷಕಿ ಸುವರ್ಣಾ ಗದಗಿಮಠ ನಿರೂಪಿಸಿದರು.