ಕನ್ನಡಪ್ರಭ ವಾರ್ತೆ ಪುತ್ತೂರುಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಪರಿಣತರಾಗಿರುತ್ತಾರೆ. ಎಲ್ಲವನ್ನೂ ಬಲ್ಲವರಿಲ್ಲ. ನೀವು ನಮ್ಮಿಂದ ಕಲಿಯುವಂತೆ ಕೆಲವು ವಿಷಯಗಳನ್ನು ನಿಮ್ಮಿಂದಲೂ ನಾವು ಕಲಿಯುತ್ತೇವೆ. ಹೀಗೆ ಕಲಿಯುವುದು ಮತ್ತು ಕಲಿಸುವುದು ಜೀವನದ ಅವಿಭಾಜ್ಯ ಅಂಗಗಳು ಎಂದು ವೇದ ಬ್ರಹ್ಮ ಮಂಜುಳಗಿರಿ ವೆಂಕಟರಮಣ ಭಟ್ಟ ಹೇಳಿದರು.ಅವರು ಗುರುವಾರ ವೇದ ಸಂವರ್ಧನ ಪ್ರತಿಷ್ಠಾನವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಸುತ್ತಿರುವ ವಯಸ್ಕರ ವೇದ ಕಲಿಕಾ ಶಿಬಿರದಲ್ಲಿ ಶಿಷ್ಯರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.ಗುರು ಶಿಷ್ಯ ಸಂಬಂಧ ಬಹಳ ವಿಶಿಷ್ಟವಾದುದು. ಗುರು ಎಂಬ ಪದದಲ್ಲಿ, ಗು ಅಂದರೆ ಅಜ್ಞಾನ, ರು ಎಂದರೆ ನಿವಾರಣೆ ಮಾಡುವುದು. ಹೀಗೆ, ಅಜ್ಞಾನವನ್ನು ದೂರ ಮಾಡುವವನೇ ಗುರು. ಈ ಗುರುವಂದನೆ ಮೂಲಕ ನಾಲ್ಕು ರೀತಿಯ ಫಲಗಳು ಸಿಗುತ್ತವೆ. ಆಯುಸ್ಸು ವೃದ್ಧಿಯಾಗುತ್ತದೆ. ವಿದ್ಯೆಯಲ್ಲಿ ಉನ್ನತಿ, ಯಶಸ್ಸು, ಕೀರ್ತಿ ಬರುತ್ತದೆ. ಮನೋಬಲ ಹೆಚ್ಚಾಗುತ್ತದೆ. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೇದ ಸಂವರ್ಧನ ಪ್ರತಿಷ್ಠಾನ ಪುತ್ತೂರು ಆಯೋಜಿಸಿರುವ ವಯಸ್ಕರ ವೇದ ಕಲಿಕಾ ಶಿಬಿರದ ವಿದ್ಯಾರ್ಥಿಗಳು ತಮಗೆ ವೇದ ಮಂತ್ರಗಳನ್ನು ಕಲಿಸುತ್ತಿರುವ ಗುರುಗಳಿಗೆ ಗುರುವಂದನೆ ಕಾರ್ಯಕ್ರಮ ನಿರ್ವಹಿಸಿದರು.
ವೇದ ಸಂವರ್ಧನ ಪ್ರತಿಷ್ಠಾನದ ವೇದ ಬ್ರಹ್ಮ ಗೌರವ ಪ್ರಾಚಾರ್ಯರೂ ಆಗಿರುವ ದೇವಸ್ಥಾನದ ವೇದಮೂರ್ತಿ ಬಡಜ ಜಯರಾಮ ಜೋಯಿಸರು, ಗುರುಗಳಾದ ಮಂಜುಳಗಿರಿ ವೆಂಕಟರಮಣ ಭಟ್ಟ ಹಾಗೂ ಉದಯ ಕೃಷ್ಣ ಅವರಿಗೆ ವಿದ್ಯಾರ್ಥಿಗಳ ಪರವಾಗಿ ಹಿರಿಯರಾದ ಬಿ.ಎಲ್. ಪಂಪ, ಕೃಷ್ಣಮೂರ್ತಿ ಹೆಬ್ಬಾರಬೈಲು, ಸತ್ಯನಾರಾಯಣ ಭಟ್ಟ ಸರ್ಪಂಗಳ ಅವರು ಫಲ ಸಮರ್ಪಣೆ ಮಾಡಿದರು. ವಿದ್ಯಾರ್ಥಿಗಳು ಎಲ್ಲರೂ ಗುರುಗಳ ಆಶೀರ್ವಾದ ಪಡೆದುಕೊಂಡು ಗುರುವಂದನೆ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ನಿವೃತ್ತ ಅಧಿಕಾರಿ ಪಿ. ಉದಯ ಕುಮಾರ್, ಹಿಮಾಲಯ ಪ್ರವಾಸ, ಕೈಲಾಸ ಯಾತ್ರೆಯ ಅನುಭವಗಳನ್ನು ಹಂಚಿಕೊಂಡರು.