- ಕೃತಕ ಅಭಾವ ಸೃಷ್ಟಿ ವಿರುದ್ಧ ಸೂಕ್ತ ಕ್ರಮಕ್ಕೆ ರೈತ ಸಂಘ-ಹಸಿರು ಸೇನೆ ಆಗ್ರಹ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಯೂರಿಯಾ ಗೊಬ್ಬರ ಮಹಾರಾಷ್ಟ್ರಕ್ಕೆ ಸಾಗಿಸಿ, ಕೃತಕ ಅಭಾವ ಸೃಷ್ಟಿಸುತ್ತಿರುವ ಕ್ರಮ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ದಿಢೀರ್ ರಸ್ತೆ ತಡೆ ಮಾಡಿ, ಪ್ರತಿಭಟಿಸಲಾಯಿತು.ಶ್ರೀ ಜಯದೇವ ವೃತ್ತದಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ರಾಗಿ, ಬತ್ತ, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಹಾಕಲು 3-4 ದಿನಗಳಿಂದ ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ರಸಗೊಬ್ಬರ ಮಾರಾಟಗಾರರು- ವಿತರಕರು ಯೂರಿಯಾ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ರೈಲ್ವೆ ವ್ಯಾಗನ್‌ಗಳಲ್ಲಿ ಬಂದ ಯೂರಿಯಾ ಗೊಬ್ಬರದ ಲೋಡನ್ನು ರಾಜ್ಯ ಸರ್ಕಾರ, ಕೃಷಿ ಇಲಾಖೆ ಲಾರಿಗಳಲ್ಲಿ ಲೋಡ್ ಮಾಡಿ, ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತ, ಸರ್ಕಾರ ಭರವಸೆ ನೀಡಿದಂತೆ ಸಮರ್ಪಕ ಯೂರಿಯಾ ಪೂರೈಸಬೇಕು. ಕಾಳಸಂತೆ ವ್ಯವಹಾರ ತಡೆಯಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಬೀವುಲ್ಲಾ, ತಕ್ಷಣದಿಂದಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆ ರೈತರಿಗೆ ಬೆಳೆ ವಿಮೆ ಹಣವನ್ನೂ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದರು.ಸಂಘಟನೆ ಮುಖಂಡರಾದ ದಾಗಿನಕಟ್ಟೆ ಬಸವರಾಜ, ಯಲೋದಹಳ್ಳಿ ಕಾಳೇಶ, ದೇವರಹಳ್ಳಿ ಶಂಕರ, ಮಲ್ಲಣ್ಣ, ಮಂಡಲೂರು ವಿಶ್ವನಾಥ, ಚಿಲಡೋಣಿ ಅಣ್ಣಪ್ಪ, ಕೆಂಪನಹಳ್ಳಿ ಗಣೇಶ, ಜತ್ಲಿ ನಾಗರಾಜ, ಹುಚ್ಚವ್ವನಹಳ್ಳಿ ಗಣೇಶ, ನಲ್ಕುದುರೆ ಚನ್ನಬಸಪ್ಪ ಇತರರು ಪ್ರತಿಭಟನೆಯಲ್ಲಿದ್ದರು. ದಲಿತ ಸಂಘರ್ಷ ಸಮಿತಿ ಮುಖಂಡ, ಬಹುಜನ ಸಮಾಜ ಪಕ್ಷದ ಮುಖಂಡ ಹರಿಹರ ಹನುಮಂತಪ್ಪ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
- - -(ಟಾಪ್ ಕೋಟ್) ರೈತ ಸಂಘ ಮತ್ತು ಹಸಿರು ಸೇನೆಯಿಂದ ಕಾರ್ಯಾಚರಣೆ ಕೈಗೊಂಡು ಮಾರಾಟಗಾರರಿಂದ ರೈತರಿಗೆ ಯೂರಿಯೂ ಕೊಡಿಸುವ ಕೆಲಸ ಸಂಘವೇ ಮಾಡಬೇಕಾಗುತ್ತದೆ. ಕೃಷಿ ಇಲಾಖೆ, ಜಿಲ್ಲಾಡಳಿತ ಬೇಕಾದರೆ ರೈತ ಸಂಘದ ನಮ್ಮಗಳ ಮೇಲೆ ಕೇಸ್ ಮಾಡಲಿ, ರೈತರಿಗೆ ಅನ್ಯಾಯ ಆಗುವುದಕ್ಕೆ ನಾವು ಬಿಡುವುದಿಲ್ಲ.
- ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ರೈತ ಮುಖಂಡ- - -
-14ಕೆಡಿವಿಜಿ4, 5.ಜೆಪಿಜಿ:ಯೂರಿಯೂ ಗೊಬ್ಬರ ಕೃತಕ ಅಭಾವ, ಮಹಾರಾಷ್ಟ್ರಕ್ಕೆ ಯೂರಿಯಾ ಗೊಬ್ಬರ ಸಾಗಣೆ ಖಂಡಿಸಿ ದಾವಣಗೆರೆ ಜಯದೇವ ವೃತ್ತದಲ್ಲಿ ಸೋಮವಾರ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆದ ಸ್ಥಳಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಭೇಟಿ ಅಗತ್ಯ ಕ್ರಮದ ಭರವಸೆ ನೀಡಿದರು.