ಲಕ್ಷ್ಮೇಶ್ವರ: ಕಲಿಕೆಯಲ್ಲಿ ನಿಧಾನಗತಿ ಇರುವ ಮಕ್ಕಳಿಗೆ ಶೈಕ್ಷಣಿಕ ವರ್ಷದುದ್ದಕ್ಕೂ ವಿಶೇಷ ವಿಧಾನ ಬಳಸಿ ಬುನಾದಿ, ಸಾಕ್ಷರತೆ ಮತ್ತು ಸಂಖ್ಯೆ ಜ್ಞಾನದ ಕಲಿಕಾ ಫಲಗಳನ್ನು ಸಾಧಿಸಲಾಗುತ್ತದೆ. ಕಲಿಕೆಯ ಸಾಧನೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಮತ್ತು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವೇ ಈ ಕಲಿಕಾ ಹಬ್ಬ ಎಂದು ಬಿಇಒ ನಾಣಿಕಿ ನಾಯ್ಕ ಹೇಳಿದರು.
ಪ್ರತಿ ಮಗುವೂ ಗಳಿಸಲೇಬೇಕಾದ ಕನಿಷ್ಠ ಕಲಿಕಾ ಫಲಗಳನ್ನು ಸಾಧಿಸುವುದು ಮುಖ್ಯ ಗುರಿ. ಆ ಗುರಿ ತಲುಪುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಯಾವುದೇ ಮಗು ಕಲಿಕೆಯಲ್ಲಿ ಹಿಂದುಳಿಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಶಿಗ್ಲಿ ಕ್ಲಸ್ಟರಿನ 8 ಸರ್ಕಾರಿ ಶಾಲೆಗಳ ಸುಮಾರು 100 ಮಕ್ಕಳು ಕಲಿಕಾ ಹಬ್ಬದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಏಳು ವಲಯ(ಸ್ಪರ್ಧೆ)ಗಳಲ್ಲಿ 1 ರಿಂದ 5 ನೇ ತರಗತಿ ಮಕ್ಕಳು ಭಾಗವಹಿಸಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಮಾತನಾಡಿ, ಶಿಗ್ಲಿ ಸಮೂಹದ ಕಲಿಕಾ ಹಬ್ಬವನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ವಿಜೃಂಭಣೆಯಿಂದ ಸಂಘಟಿಸಲಾಗಿದೆ. ಸಮೂಹದ ಎಲ್ಲ ಶಿಕ್ಷಕರ ಉತ್ಸಾಹ ಮತ್ತು ಸೃಜನಶೀಲತೆ ಮೆಚ್ಚುವಂತದ್ದು ಎಂದು ಹೇಳಿದರು.
ಶಿಗ್ಲಿ ಕ್ಲಸ್ಟರ್ ಸಿಆರ್‌ಪಿ ಜ್ಯೋತಿ ಗಾಯಕವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಸಿ. ದೇವಾಂಗಮಠ ನಿರೂಪಿಸಿದರು. ಪ್ರಧಾನ ಶಿಕ್ಷಕ ಜಿ.ಬಿ. ರಾಮಗೇರಿ ಸ್ವಾಗತಿಸಿದರು. ಡಿ.ಬಿ. ಪಾಟೀಲ ವಂದಿಸಿದರು.