ಚಂದ್ರು ಕೊಂಚಿಗೇರಿ
ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಯುವ ಕವಿಗಳು ತಮ್ಮ ಭಾವನೆಗಳಿಗೆ ಬಂಡಾಯ ರೂಪ ಕೊಟ್ಟು, ಅಕ್ಷರದ ಆಕಾರ ನೀಡಿ, ಕವಿತೆಗಳನ್ನು ವಾಚಿಸಿದರು. ನೆರೆದಿದ್ದ ಸಭಿಕರು, ಕವಿ ಸಹೃದಯರು, ಸಾಹಿತ್ಯಾಸಕ್ತರ ಮನಸ್ಸಿಗೆ ಮುದ ನೀಡಿದವು.
ಯುವ ಕವಿಗಳ ಕವಿತೆಗಳಲ್ಲಿ ಮೌಢ್ಯತೆಗಳನ್ನು ಕಿತ್ತು ಹಾಕಿ, ಸಮಸಮಾಜ ನಿರ್ಮಾಣ, ದೇಶ ಭಕ್ತಿಯ ಅಭಿಮಾನ, ಸಾಮಾಜಿಕ ಮೌಲ್ಯಗಳಿಗಳಿಗೆ ಶಕ್ತಿ ತುಂಬುವಂತಿದ್ದವು. ಕವಿತೆಗಳಿಗೆ, ಹೋರಾಟದ ಶಕ್ತಿಯೂ ಇದೆ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತಹ ಸಾಹಿತ್ಯಿಕ ಕವಿತೆಗಳು ಕವಿಗೋಷ್ಠಿಯಲ್ಲಿ ಕೇಳಿ ಬಂದವು.ವೈ.ಟಿ. ಅನಸೂಯಾ ಅವರ ಸೂಳೆ ಕವಿತೆಯಲ್ಲಿ ವಯೋಧರಗಳನುಬ್ಬಿಸಿ ಲಜ್ಜೆಗೆಟ್ಟ ಗಂಡಸರಿಂದ ನರಳುವಳು ಹೊಟ್ಟೆಪಾಡಿಗಾಗಿ, ಕಿಬ್ಬೊಟ್ಟೆಯಡಿಯಲಿ, ನೆರಿಗೆ ಗರಿ ಪಡೆದು ಅಲೆಯುವಳು ಕೆಂಪು ದೀಪದ ಬೆಳಕಲಿ, ಕಣ್ಣಿಗೆ ಕಾಪಿಟ್ಟ ಕಾಡಿಗೆ ಚಿಗರಿ ಕಂಗಳ ಚಲುವೆ, ಹೀಗೆ ಸೂಳೆಯನ್ನು ಸಾಲು ಸಾಲಾಗಿ ಹೊಗಳಿಕೆಯ ನಂತರದಲ್ಲಿ, ಜಗವು ಕರೆಯುವುದು ಅವಳನ್ನು ಸೂಳೆಯೆಂದು, ಸೂಳೆ ಸಂಕವ್ವ ಶರಣೆಯಾಗಿಸಿ ಗಣಿಕೆಯರನ್ನು ಕಂಡ ಬಸವನ್ನಿತೆಂದು ತಲುವಪ್ಪಿ ಸುಖ ಸುಖ ಕೊಡುವಳಲ್ಲದೇ ಮನವನಪ್ಪಿ ಸುಖ ಕೊಡುವಳೇ? ಹೀಗೆ ಇವರ ಕವಿತೆ ಸಭಿಕರನ್ನು ಮೆಚ್ಚಿಸಿತು.
ರೇಷ್ಮ ಕಂದಕೂರ ಅವರ ಕಾಯುತ್ತಿದ್ದೇನೆ, ಆರತಿ ನರಸಿಂಹರಾವ್ ಇವರ ಕನ್ನಡ, ಆರ್.ಪಿ. ಮಂಜು ಅವರ ಅವಳೆಂದರೆ ಅವಳು, ಎಂ. ಕಾರ್ತಿಕ ಮರಿಸ್ವಾಮಿಮಠ ಅವರ ಅವಳು ಹೆಣ್ಣು, ಲಕ್ಷ್ಮಣ ವಿಟ್ರವಟ್ಟಿ ಅವರ ಬದುಕು ಮತ್ತು ಕಣ್ಣೀರು, ರೇಣುಕಾ ಹೆಳವರ್ ಅವರ ಲಿವಿಂಗ್ ಟುಗೆದರ್, ಅನಿಲ್‌ಕುಮಾರ ಅವರ ಬುದ್ಧ, ಡಾ. ಶರೀಫ ಅಸ್ಮಕಲ್ ಅವರ ಮತ್ತೆ ಮತ್ತೆ ಸಾರಬೇಕಿದೆ, ಕೀರ್ತಿ ಅಕ್ಕಿ ಅವರ ವಿಜಯೋತ್ಸವ, ತುಳಸಿ ಕೂಡ್ಲಗಿ ಅವರ ಇತಿಹಾಸ, ಶೇಖ್ ಮಹ್ಮದ್ ಖಾಜಿ ಅವರ ನಾನು ಹೆಣ್ಣಲ್ಲ ಸುಮ್ಮನಿರಿ, ಹೀಗೆ ಹತ್ತಾರು ಬಗೆಯ ಕವಿತೆಗಳನ್ನು ಯುವ ಕವಿಗಳು ವಾಚನ ಮಾಡಿದರು.
ಸಾಹಿತಿ ಡಾ. ಚನ್ನಬಸಪ್ಪ ಚಿಲಕರಾಗಿ ಮಾತನಾಡಿ, ಈ ನಾಡಿನಲ್ಲಿ ಕಾರ್ಖಾನೆಗಳ ಕೇಕೆ ಹಾಕುತ್ತಿರುವುದರಿಂದ ನೆಲ, ಜಲ, ಗಾಳಿ ಕಲುಷಿತಗೊಂಡಿವೆ. ಜನ ಆಸ್ಪತ್ರೆಯ ಪಾಲಾಗುತ್ತಿದ್ದಾರೆ. ಇದು ಯುವ ಕವಿತೆಗಳು ಜನರ ಮನಸ್ಸನ್ನು ಗೆದ್ದು ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ನಿಮ್ಮ ಮೇಲಿದೆ ಎಂದರು.