21ರಂದು ಕಾರವಾರದಲ್ಲಿ 9ನೇ ತಾಲೂಕು ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Feb 16, 2026, 02:30 AM IST
ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದರು | Kannada Prabha

ಸಾರಾಂಶ

ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕಾರವಾರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 21ರಂದು ನಗರದ ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯ ದಿ. ಶಂಕರ ಬಾಬಿ ಸಾವಂತ ಸಭಾಭವನದಲ್ಲಿ ಜರುಗಲಿದೆ.

ಜಿ.ಡಿ. ಗೋವಿಂದಕುಮಾರ ಅಧ್ಯಕ್ಷತೆ । ಆಮಂತ್ರಣ ಪತ್ರಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ ಕಾರವಾರ

ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಿರುವ ಕಾರವಾರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 21ರಂದು ನಗರದ ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯ ದಿ. ಶಂಕರ ಬಾಬಿ ಸಾವಂತ ಸಭಾಭವನದಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ರಾಮಾ ಎನ್.ನಾಯ್ಕ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬುಡಕಟ್ಟು ಸಮುದಾಯದ ಖ್ಯಾತ ಸಾಹಿತಿ, ರಂಗಭೂಮಿ ಹಾಗೂ ಯಕ್ಷಗಾನ ಕಲಾವಿದರಾದ ಜಿ.ಡಿ. ಗೋವಿಂದಕುಮಾರ ಆಯ್ಕೆಯಾಗಿದ್ದಾರೆ. ಕಾಡಿನ ಮಕ್ಕಳ ಬದುಕನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ಪರಿಚಯಿಸಿರುವ ಇವರು 25ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ ಎಂದರು.

ಸಮ್ಮೇಳನದಂದು ಬೆಳಗ್ಗೆ 8 ಗಂಟೆಗೆ ತಹಸೀಲ್ದಾರ್ ನಿಶ್ಚಲ ನರೋನಾ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ಧ್ವಜವನ್ನು ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಹಾಗೂ ನಾಡಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ರಾಮಾ ಎನ್. ನಾಯ್ಕ ನೆರವೇರಿಸಲಿದ್ದಾರೆ. ಬೆಳಗ್ಗೆ 8.45ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಎನ್. ನಾಯ್ಕ ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ, ಈ ಮೆರವಣಿಗೆಯಲ್ಲಿ 500 ಮೀಟರ್ ಉದ್ದದ ಬೃಹತ್ ಕನ್ನಡ ಧ್ವಜ ಪ್ರದರ್ಶಿಸಲಾಗುವುದು. ಕನ್ನಡಾಂಬೆಯ ರಥದೊಂದಿಗೆ ಸಾಗುವ ಈ ಮೆರವಣಿಗೆಯು ನಾಡಾಭಿಮಾನ ಇಮ್ಮಡಿಗೊಳಿಸಲಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮಾಧವ ಬಿ.ನಾಯಕ ತಿಳಿಸಿದರು.

ಬೆಳಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಜಯಪ್ರಕಾಶ ಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಡಾ. ಆರ್.ಜಿ. ಗುಂದಿ ಅಧ್ಯಕ್ಷತೆಯಲ್ಲಿ ರಂಗಭೂಮಿ ಮತ್ತು ಕಾರವಾರ ಕುರಿತು ವಿಚಾರಗೋಷ್ಠಿ ಹಾಗೂ ನಂತರ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.

ಸಂಜೆ 4.30ಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಪೌರಾಯುಕ್ತ ಜಗದೀಶ ಹುಲಗೆಜ್ಜೆ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸರಿತಾ ಗೋವೆಕರ, ಆನಂದು ನಾಯ್ಕ, ವಿ.ಆರ್. ರಾಣೆ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ಮಾಹಿತಿ ನೀಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಕಸಾಪ ಕಾರವಾರ ಘಟಕದ ಬಾಬು ಶೇಖ್, ಶಿವಾನಂದ ತಾಂಡೇಲ, ಜಿ.ಡಿ. ಮನೋಜೆ, ಖೈರುನ್ನಿಸಾ ಶೇಖ್, ರಮೇಶ ಗುನಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ರಂಗಮಂದಿರ ಇಲ್ಲದ ಕೊರಗು

ಇದೇ ವೇಳೆ ಜಿಲ್ಲಾಕೇಂದ್ರ ಕಾರವಾರದಲ್ಲಿ ರಂಗಮಂದಿರ ಇಲ್ಲದ ಕುರಿತು ಬೇಸರ ವ್ಯಕ್ತಪಡಿಸಿದ ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ, ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಒಂದು ಸುಸಜ್ಜಿತ ಜಿಲ್ಲಾ ರಂಗಮಂದಿರ ಇಲ್ಲದಿರುವುದು ದುರಂತ. ಎಲ್ಲಾ ಕಾರ್ಯಕ್ರಮಗಳಿಗೂ ನಾವು ದುಬಾರಿ ವೆಚ್ಚ ನೀಡಿ ಖಾಸಗಿ ಸಭಾಭವನಗಳನ್ನು ಅವಲಂಬಿಸಬೇಕಾಗಿದೆ. ಕಾರವಾರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರವನ್ನು ತಂದು ರಂಗಮಂದಿರ ನಿರ್ಮಾಣಕ್ಕೆ ಒತ್ತಾಯಿಸಬೇಕಿದೆ ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕಲಿಕೆ ಪ್ರದರ್ಶನಕ್ಕೆ ಕಲಿಕಾ ಹಬ್ಬ ವೇದಿಕೆ: ಬಿಇಒ ನಾಣಿಕಿ ನಾಯ್ಕ
ಹಂಪಿ ಉತ್ಸವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ