ಕಲಿಕೆ ಒಂದು ತಪಸ್ಸಿದ್ದಂತೆ: ಕೆ.ಪಿ.ಬಾಬು ಅಭಿಪ್ರಾಯ

KannadaprabhaNewsNetwork |  
Published : Oct 28, 2024, 01:06 AM IST
೨೭ಕೆಎಂಎನ್‌ಡಿ-೫ಮಂಡ್ಯ ತಾಲೂಕು ಯಲಿಯೂರು ಸಮೀಪವಿರುವ ಅನಿಕೇತನ ವಿದ್ಯಾಸಂಸ್ಥೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ಪ್ರಸ್ತುತ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ, ವಿದ್ಯಾರ್ಥಿಗಳು ಅವಕಾಶಗಳನ್ನು ಸಮಯೋಚಿತವಾಗಿ ಬಳಸಿಕೊಳ್ಳಬೇಕು. ಮಾಹಿತಿ ಎನ್ನುವುದು ನಿಮ್ಮ ಕೈ ಬೆರಳ ತುದಿಯಲ್ಲಿದೆ. ಅದನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ವಿದ್ಯಾರ್ಥಿ ದಿಸೆಯಲ್ಲಿ ಓದಿನ ಕಡೆ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಕಲಿಕೆಯನ್ನು ತಪಸ್ಸಾಗಿಸಿಕೊಳ್ಳಬೇಕು. ಆಗ ಜೀವನದಲ್ಲಿ ಮಹತ್ವವಾದುದನ್ನು ಸಾಧಿಸಲು ಸಾಧ್ಯ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ತಾಲೂಕಿನ ಯಲಿಯೂರು ಗ್ರಾಮದ ಅನಿಕೇತನ ವಿದ್ಯಾ ಸಂಸ್ಥೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪ್ರಸ್ತುತ ಕಲಿಕೆಗೆ ಸಾಕಷ್ಟು ಅವಕಾಶಗಳಿವೆ, ವಿದ್ಯಾರ್ಥಿಗಳು ಅವಕಾಶಗಳನ್ನು ಸಮಯೋಚಿತವಾಗಿ ಬಳಸಿಕೊಳ್ಳಬೇಕು. ಮಾಹಿತಿ ಎನ್ನುವುದು ನಿಮ್ಮ ಕೈ ಬೆರಳ ತುದಿಯಲ್ಲಿದೆ. ಅದನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ. ವಿದ್ಯಾರ್ಥಿ ದಿಸೆಯಲ್ಲಿ ಓದಿನ ಕಡೆ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಆಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಶಿಸ್ತು, ಸಂಸ್ಕೃತಿ, ಸಂಸ್ಕಾರವೂ ಅಷ್ಟೇ ಮುಖ್ಯ. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ, ಮಾನವೀಯ ಗುಣಗಳನ್ನು ರೂಢಿಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತಂದೆ-ತಾಯಿ ಶ್ರಮ ವಹಿಸುತ್ತಿರುತ್ತಾರೆ. ಅವರ ಪರಿಶ್ರಮ ಸಾರ್ಥಕಗೊಳ್ಳಬೇಕಾದರೆ ನೀವು ನಿರಂತರ ಅಧ್ಯಯನಶೀಲರಾಗಬೇಕು. ಅವರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಮಕ್ಕಳು ಶೈಕ್ಷಣಿಕವಾಗಿ ಬೆಳವಣಿಗೆ ಕಂಡು ಉನ್ನತ ಹುದ್ದೆಗೇರಿದಾಗ ತಂದೆ-ತಾಯಿಗಳ ಶ್ರಮ ಹಾಗೂ ಗುರುಗಳು ಕಲಿಸಿದ ವಿದ್ಯೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ಶಾಲೆಯಲ್ಲಿ ಮಾಡಿದ ಪಠ್ಯ ವಿಷಯಗಳನ್ನು ಅಂದೇ ಮನನ ಮಾಡಿಕೊಂಡು ಕಲಿಕೆಯನ್ನು ಸುಲಭವಾಗಿಸಿಕೊಳ್ಳಬೇಕು. ಪರೀಕ್ಷೆ ಎದುರಾದಾಗ ಓದುವ ಪ್ರಯತ್ನಕ್ಕಿಳಿಯಬಾರದು. ಅದರಿಂದ ಭಯ, ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಯನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸುವುದಕ್ಕೆ ಸಜ್ಜಾಗಬೇಕು ಎಂದರು.

ಓದುವ ವಿದ್ಯಾರ್ಥಿಗಳು ಆರೋಗ್ಯವನ್ನೂ ಉತ್ತಮವಾಗಿ ಕಾಪಾಡಿಕೊಳ್ಳಬೇಕು. ಸೊಪ್ಪು, ತರಕಾರಿ, ಮೊಟ್ಟೆ, ಮೀನು ಸೇರಿದಂತೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ನಿತ್ಯ ಒಂದು ಗಂಟೆಯನ್ನು ವ್ಯಾಯಾಮ, ಧ್ಯಾನಕ್ಕೆ ಮೀಸಲಿಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಸದೃಢಗೊಳ್ಳುತ್ತದೆ. ಏಕಾಗ್ರತೆ ಮೂಡುತ್ತದೆ ಎಂದು ನುಡಿದರು.

ಓದುವ ಸಮಯದಲ್ಲಿ ಮೊಬೈಲ್, ಟೀವಿ, ಸಾಮಾಜಿಕ ಜಾಲ ತಾಣಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಪಠ್ಯ ವಿಷಯಗಳನ್ನು ಓದುವುದಕ್ಕೆ ನಿಮ್ಮದೇ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ವಿದ್ಯಾರ್ಥಿಗಳೊಂದಿಗೆ ಪಠ್ಯ ವಿಷಯಗಳನ್ನು ಚರ್ಚಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಗೊಂದಲ-ಸಮಸ್ಯೆಗಳಿದ್ದರೆ ಶಿಕ್ಷಕರಿಂದ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.

ಒಳ್ಳೆಯ ಪುಸ್ತಕಗಳನ್ನು ಓದುವುದು ವಿದ್ಯಾರ್ಥಿಗಳ ಹವ್ಯಾಸವಾಗಬೇಕು. ಇದರಿಂದ ಜ್ಞಾನಾರ್ಜನೆ ಹೆಚ್ಚುತ್ತದೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡಂತಾಗುತ್ತದೆ. ಅವೆಲ್ಲವೂ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳುವುದಕ್ಕೆ ನೆರವಾಗುತ್ತವೆ ಎಂದರು.

ವಿದ್ಯಾರ್ಥಿಗಳು ಮೊದಲು ಕೀಳರಿಮೆಯಿಂದ ಹೊರಬರಬೇಕು. ಛಲ ಮತ್ತು ಆತ್ಮವಿಶ್ವಾಸದಿಂದ ಓದಿನಲ್ಲಿ ತೊಡಗಬೇಕು. ಗುರಿ ಸಾಧನೆಯನ್ನೇ ಕೇಂದ್ರೀಕರಿಸಿಕೊಂಡು ಕಲಿಕೆಯಲ್ಲಿ ತೊಡಗಿದಾಗ ಏನನ್ನಾದರೂ ಸಾಧಿಸುವ ಶಕ್ತಿ, ಚೈತನ್ಯ ಬರುತ್ತದೆ ಎಂದರು.

ಅನಿಕೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ರಾಮಲಿಂಗಯ್ಯ, ಮುಖ್ಯ ಶಿಕ್ಷಕಿ ತೇಜೇಶ್ವರಿ ಹಾಗೂ ಶಿಕ್ಷಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ