ಕನ್ನಡ ಕಾವ್ಯ ಕಲಿಕೆಯಿಂದ ಸಂವೇದನೆ ಹೆಚ್ಚಳ: ಕರಿಯಪ್ಪ ಮಾಳಗಿ

KannadaprabhaNewsNetwork |  
Published : Mar 25, 2026, 03:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್    | Kannada Prabha

ಸಾರಾಂಶ

ಕನ್ನಡದ ಕಾವ್ಯ, ಪಠ್ಯಗಳನ್ನು ಕಲಿಯುವುದರಿಂದ ರಸ ಸ್ವಾದದ ಸಂವೇದನೆಗಳು ಹೆಚ್ಚಾಗಿ ನೆನಪಿನ ಶಕ್ತಿ ಉಲ್ಬಣವಾಗಿ ಅರಿವನ್ನು ವಿಸ್ತರಿಸುತ್ತದೆ ಎಂದು ಪ್ರಾಂಶುಪಾಲ ಪ್ರೊ.ಕರಿಯಪ್ಪ ಮಾಳಗಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕನ್ನಡದ ಕಾವ್ಯ, ಪಠ್ಯಗಳನ್ನು ಕಲಿಯುವುದರಿಂದ ರಸ ಸ್ವಾದದ ಸಂವೇದನೆಗಳು ಹೆಚ್ಚಾಗಿ ನೆನಪಿನ ಶಕ್ತಿ ಉಲ್ಬಣವಾಗಿ ಅರಿವನ್ನು ವಿಸ್ತರಿಸುತ್ತದೆ ಎಂದು ಪ್ರಾಂಶುಪಾಲ ಪ್ರೊ.ಕರಿಯಪ್ಪ ಮಾಳಗಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ಕಾಲೇಜಿಲ್ಲಿ (ಸ್ವಾಯತ್ತ) ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಾನಪದ ಸಿರಿಯಜ್ಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪಠ್ಯಕ್ರಮ ಬೋಧನಾ ಕೌಶಲ ಮತ್ತು ಕನ್ನಡ ಬಳಕೆಯ ನೆಲೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಪೀಳಿಗೆ ಓದುವ ಮತ್ತು ಕೇಳಿಸಿಕೊಳ್ಳುವ ವ್ಯವದಾನವನ್ನು ಕಳೆದುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು

ಕನ್ನಡ ಸಾಹಿತ್ಯದಲ್ಲಿ ಕೇಳುಗ ಮತ್ತು ಹೇಳುಗ ಸಂಸ್ಕೃತಿಗೆ ಒಂದು ಪರಂಪರೆಯಿದೆ.ಪಂಪಭಾರತ, ಗದಾಯುದ್ಧ, ಜೈಮಿನಿ ಭಾರತ, ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಭಾರತ ಪಠ್ಯಗಳನ್ನು ನಮ್ಮ ಕಾಲದ ಗುರುಗಳು ಹೇಳುತ್ತಿದ್ದನ್ನು ಕೇಳಿ ಸಾಕಷ್ಟು ಪ್ರಭಾವಿತರಾಗಿದ್ದೆವು. ಆ ಪಠ್ಯ ವಿಷಯಗಳು ಇಂದಿಗೂ ನೆನಪಿನಲ್ಲಿವೆ. ಆದರೆ ಇಂದಿನ ವಿದ್ಯಾರ್ಥಿಗಳು ಬರೀ ಸಾರಾಂಶಕ್ಕೆ ಸೀಮಿತವಾಗಿದ್ದು ಅವುಗಳನ್ನು ಕಲಿಯಲೇಬೇಕಾದ ಅಗತ್ಯವಿದೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹಾಂತೇಶ ಪಾಟೀಲ ಮಾತಾನಾಡಿ ಕನ್ನಡ ಸೀಮೆಯನ್ನು ಕಾವೇರಿಯಿಂದ ಗೋದಾವರಿಗೆ ವಿಸ್ತರಿಸಿದನ್ನು ಹೇಳುವ ವಾಕ್ಯ ಕನ್ನಡಿಗರಿಗೆ ಆಸ್ಮಿತೆಯಾಗಿದೆ. ಪಂಪ, ರನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ ಮುಂತಾದವರು ಕನ್ನಡ ಬಳಕೆಯನ್ನು ತಿರುಳ್ಗನ್ನಡದಲ್ಲಿ ಬರೆದು ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ದೇವನೂರು, ಸಿದ್ಧಲಿಂಗಯ್ಯ, ಕೆ.ಬಿ.ಸಿದ್ಧಯ್ಯ ಸೇರಿದಂತೆ ವರ್ತಮಾನದ ಸೃಜನಶೀಲ ಬರಹಗಾರರು ಬಳಸುವ ಭಾಷೆಯೂ ಪ್ರಾದೇಶಿಕ ಆಡುನುಡಿಯನ್ನು ತಮ್ಮ ಸಾಹಿತ್ಯದಲ್ಲಿ ತರುವ ಮೂಲಕ ಕನ್ನಡದಲ್ಲಿ ಭಾಷಾ ಪ್ರಯೋಗಶೀಲತೆಯನ್ನು ಪರಿಚಯಿಸಿದ್ದಾರೆ ಎಂದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಟಿ.ಗಾಯಿತ್ರಮ್ಮ ಮಾತನಾಡಿ, ಕನ್ನಡ ಕಾವ್ಯ ಮತ್ತು ಮಾಧ್ಯಮಗಳಲ್ಲಿ ಭಾಷೆ ಬಳಕೆ ಯಾವ ರೀತಿಯಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಆವಲೋಕಿಸಬೇಕಿದೆ. ಇಂಗ್ಲೀಷ್, ದೇಶದ ಹಲವು ಭಾಷೆಗಳ ಎದುರಾಳಿ ಭಾಷೆಯಾಗಿದ್ದು ಇದೀಗ ಹಿಂದಿ ಹೇರಿಕೆ ಕನ್ನಡ ಸೇರಿ ಇತರೆ ಭಾಷೆಗಳಿಗೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಸೃಷ್ಠಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲಸಕಾರ್ಯಗಳು ಕನ್ನಡ ಕಟ್ಟುವ, ಬೆಳೆಸುವಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಖ್ಯಾತ ವಿಮರ್ಶಕಿ ಡಾ.ಆರ್.ತಾರಿಣಿ ಶುಭದಾಯಿನಿ ಮಾತನಾಡಿ ಎಲ್ಲಾ ಭಾಷೆಗಳನ್ನು ಕಲಿಯುವ ಜೊತೆಗೆ ಸಹಜ ಜೀವನದಲ್ಲಿ ಕನ್ನಡದಲ್ಲಿ ಆಲೋಚಿಸುವ, ಕೆಲಸ ಮಾಡುವ, ಮತ್ತು ಸೃಜನಶೀಲವಾಗಿ ಬರೆಯುವುದನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಚಿತ್ತಯ್ಯ ಉಪ್ಪಾರಹಟ್ಟಿ, ಡಾ. ವೇದಾಂತ ಏಳಂಜಿ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಲಕ್ಷ್ಮಿ, ಸಹಾಯಕ ಪ್ರಾಧ್ಯಾಪಕಿ ಪ್ರೊ.ಸಲ್ಮಾ, ಪ್ರೊ,ಗಿರೀಶ್ ಗೌಡ, ಉಪನ್ಯಾಸಕ ಜಿ.ಯಶೋಧರ, ಹನುಮಂತಪ್ಪ, ಪ್ರಾಧ್ಯಾಪಕ ಮಧುಸೂದನ, ಮುರಳಿಧರ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗಜೀವನ್ ರಾಂ, ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ: ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಚಳ್ಳಕೆರೆಯಲ್ಲಿ ಶುರುವಾಯ್ತು ಗ್ಯಾಸ್ ಟ್ರಬಲ್