ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿಯ ಅಕ್ಕನಹಳ್ಳಿಕೂಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಸಮಾಜ ಸೇವಕ ಅಬ್ದುಲ್ ಬಾಸಿತ್ ನೋಟ್‌ಬುಕ್, ಪೆನ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನಗೆ ಪ್ರತಿ ತಿಂಗಳು ಬರುವ ಸಂಬಳದಲ್ಲಿ ಒಂದಿಷ್ಟು ಹಣವನ್ನು ದೇವಾಲಯ ಹಾಗೂ ಮಸೀದಿಗಳ ನಿರ್ಮಾಣಕ್ಕೆ ಜೊತೆಗೆ ಬಡ ಕುಟುಂಬಗಳ ನಿರ್ವಹಣೆಗೆ ಆಹಾರಧಾನ್ಯ ಪೂರೈಕೆಗೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆಗೆ ಖರ್ಚು ಮಾಡುತ್ತಿದ್ದೇನೆ. ಅಕ್ಕನಹಳ್ಳಿ ಕೂಡು ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ನೋಟ್‌ಬುಕ್ ಹಾಗೂ ಪೆನ್ ವಿತರಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಈ ಶಾಲೆ ಮಕ್ಕಳಿಗೆ ಇನ್ನು ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಕಸ್ತೂರಿ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ಎನ್ ಸಿ ನಟೇಶ್ ಮಾತನಾಡಿ, ತಮ್ಮ ಇಳಿ ವಯಸ್ಸಿನಲ್ಲೂ ಸಮಾಜ ಸೇವೆ ಮಾಡುತ್ತಿರುವ ಅಬ್ದುಲ್ ಬಾಸಿತ್ ಅವರ ಕಾರ್ಯವನ್ನು ನಾವು ಸ್ವಾಗತಿಸಿ ಗೌರವಿಸಬೇಕು. ಇವತ್ತಿನ ಕಾಲದಲ್ಲಿ ತಾವು ತಮ್ಮ ಕುಟುಂಬ ಚೆನ್ನಾಗಿರಬೇಕು ಎಂದು ಬಯಸುವ ವ್ಯಕ್ತಿಗಳ ಮಧ್ಯದಲ್ಲಿ ಇವರು ದೊಡ್ಡವರಾಗಿ ಕಾಣುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ನೋಟ್‌ಬುಕ್, ಪೆನ್ ವಿತರಣೆ ಮಾಡಿದ್ದಾರೆ. ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸದಿದ್ದರೆ ಶಿಕ್ಷಣ ಖಾಸಗಿ ಕಾರಣವಾಗಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಂಭವವಿದೆ. ಈಗಾಗಲೇ ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ಜಾರಿ ಮಾಡಬೇಕು. ಇದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಬಹುದು ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಗ್ರಾಮಗಳಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ಮುಚ್ಚಿವೆ. ಮುಂಬರುವ ದಿನಗಳಲ್ಲಿ ಶಿಕ್ಷಕರು ಹಾಗೂ ಪೋಷಕರು ಎಚ್ಚೆತ್ತು ಸರ್ಕಾರಿ ಶಾಲೆ ಉಳಿಸಲು ಮುಂದಾಗಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶೇಖರಣ್ಣ, ಮುಖ್ಯ ಶಿಕ್ಷಕ ರಾಹುಲ್ ಗೋವರ್ಧನ್, ಶಿಕ್ಷಕರಾದ ಪಾರ್ವತಿ, ಮಂಜುಳಾ ಪ್ರದೀಪ್, ಸೇರಿದಂತೆ ಇತರರು ಹಾಜರಿದ್ದರು.