ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕೊಡವ ಕ್ರಿಕೆಟ್ ಅಕಾಡೆಮಿಯ ಚೊಚ್ಚಲ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಕೊಡವ ಸಮಾಜವನ್ನು ಮಣಿಸಿದ ಪೊನ್ನಂಪೇಟೆ ಕೊಡವ ಸಮಾಜ ಚಾಂಪಿಯನ್ ಪಟ್ಟ ಅಲಂಕರಿಸಿತು.ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಅಂತರ್ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ನಗರದ ಪದವಿ ಪೂರ್ವ ಮೈದಾನದಲ್ಲಿ ನಡೆಯಿತು.
ಅಂತರ್ ಕೊಡವ ಸಮಾಜಗಳ ಮಧ್ಯೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಪ್ರಥಮ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಅಯೋಜಿಸಲಾಯಿತು. ಪಂದ್ಯಾಟದಲ್ಲಿ ಕೊಡಗಿನ ನಾಪೋಕ್ಲು ಕೊಡವ ಸಮಾಜ, ವಿರಾಜಪೇಟೆ ಕೊಡವ ಸಮಾಜ ಎ,ಬಿ ತಂಡಗಳು, ಟಿ.ಶೆಟ್ಟಿಗೇರಿ ಎ,ಬಿ ತಂಡಗಳು, ಪೊನ್ನಂಪೇಟೆ ಕೊಡವ ಸಮಾಜ, ಕುಶಾಲನಗರ ಕೊಡವ ಸಮಾಜ, ಬಾಳಲೆ ಕೊಡವ ಸಮಾಜ, ಮಕ್ಕಂದೂರು ಕೊಡವ ಸಮಾಜ ಮತ್ತು ಮೂರ್ನಾಡು ಕೊಡವ ಸಮಾಜಗಳ ಕ್ರಿಡಾ ಪಟುಗಳು ಭಾಗವಹಿಸಿದ್ದರು.ವಿರಾಜಪೇಟೆ ಕೊಡವ ಸಮಾಜ ಎ ತಂಡ ಮತ್ತು ಪೊನ್ನಂಪೇಟೆ ಕೊಡವ ಸಮಾಜ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಪೊನ್ನಂಪೇಟೆ 5 ವಿಕೆಟ್‌ಗಳ ಗೆಲುವು ಸಾಧಿಸಿತು.ಟಾಸ್ ಗೆದ್ದ ಪೊನ್ನಂಪೇಟೆ ತಂಡ ಬೌಲಿಂಗ್ ಅಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ವಿರಾಜಪೇಟೆ ಕೊಡವ ಸಮಾಜ ನಿಗದಿತ 12 ಓವರ್‌ಗಳಲ್ಲಿ 6 ವಿಕೇಟ್ ನಷ್ಟಕ್ಕೆ 93 ರನ್ ಗಳಿಸಿತು. 94 ರನ್‌ಗಳ ಗುರಿ ಬೆನ್ನಟ್ಟಿದ ಪೊನ್ನಂಪೇಟೆ ಕೊಡವ ಸಮಾಜ, 5 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿ ಜಯ ಸಾಧಿಸಿತು.
ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೂ ಟ್ರೋಫಿ ನೀಡಿ ಗೌರವಿಸಲಾಯಿತು.ಪಂದ್ಯಾವಳಿಯ ಉತ್ತಮ ಬೌಲರ್ ಪ್ರಶಸ್ತಿಯನ್ನು ಆಟ್ರಂಗಡ ತಶ್ವಿನ್, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಮಂಡೆಪಂಡ ತಿಮ್ಮಯ್ಯ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಮುಕ್ಕಾಟೀರ ಲಸಿತ್ ಮಾದಪ್ಪ ಪಡೆದುಕೊಂಡರು.ಅದೇಯಂಗಡ ಶಾಶ್ವತ್, ನವೀನ್ ಚೆಕ್ಕೇರ, ಅಳಮೆಂಗಡ ಮೋನಾ ಚೆಂಗಪ್ಪ, ಮಾಚಂಗಡ ದರ್ಶನ್, ಕೊಕ್ಕೆಂಗಡ ರಂಜಿ ಮತ್ತು ಕೊಟ್ಟಂಗಡ ಸೂರಜ್ ತೀರ್ಪುಗಾರಿಕೆ ಮತ್ತು ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ಕಾಂಡೇರ ಡಾನ್ ಕುಶಾಲಪ್ಪ ವೀಕ್ಷಕ ವಿವರಣೆ ನೀಡಿದರು.* ಸಮಾರೋಪ ಸಮಾರಂಭ
ರಿಪಬ್ಲಿಕ್ ಟಿ.ವಿ ನೆಟ್‌ವರ್ಕ್ಸ್ ಅಧ್ಯಕ್ಷ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್ ಫೈನಲ್ ಪಂದ್ಯವನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.ಸಮಾರೋಪದಲ್ಲಿ ಮಾತನಾಡಿದ ಕಿಶನ್, ಇಂದು ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ವಿಫುಲ ಅವಕಾಶಗಳಿವೆ. ಕೊಡವ ಜನಾಂಗದ ಬೆರಳಣಿಕೆಯ ಕ್ರಿಕೆಟ್ ಪಟುಗಳು ಮಾತ್ರ ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲೆದರ್ ಬಾಲ್ ಕ್ರಿಕೆಟ್‌ಗೆ ಪ್ರೋತ್ಸಾಹ ಮತ್ತು ಉತ್ತಮ ಪಟುಗಳ ಆಯ್ಕೆ ಮಾಡುವ ನಿಟ್ಟಿನಲ್ಲಿ ಅಂತರ್ ಕೊಡವ ಸಮಾಜಗಳ ನಡುವೆ ಕ್ರಿಕೆಟ್ ಪಂದ್ಯಾಟ ಅಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯಾಟವು ಹೆಚ್ಚಿನ ಮಾನ್ಯತೆ ಪಡೆದು ಪ್ರಸಿದ್ಧಿ ಹೊಂದುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಪ್ರಕಾಶ್ , ಕೊಡಗು ಕ್ರೀಡಾ ಕಲಿಗಳ ನಾಡು. ಹಾಕಿ ಪಂದ್ಯಕ್ಕೆ ಮಾನ್ಯತೆ ನೀಡಿದಂತೆ ಕ್ರಿಕೆಟ್ ಪಂದ್ಯಾಟಕ್ಕೂ ಪ್ರೋತ್ಸಾಹ ನೀಡುವಂತಾಗಬೇಕು. ಕೊಡವ ಕ್ರಿಕೆಟ್ ಅಕಾಡೆಮಿಯ ಈ ಪಂದ್ಯಾವಳಿಯು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತದೆ ಎಂದು ಹೇಳಿದರು.ಮಾಚಿಮಾಡ ದೇವಾನಂದ್ ಮಾತನಾಡಿ, ಕೊಡವ ಸಮಾಜದ ನಡುವೆ ನಡೆಯುತ್ತಿರುವ ಕ್ರಿಕೆಟ್ ಹೆಚ್ಚು ಪ್ರಚಲಿತವಾಗಬೇಕು ಮತ್ತು ಜನಾಂಗ ಬಾಂಧವರು ಹೆಚ್ಚು ಸಹಕಾರ ನೀಡುವಂತಾಗಬೇಕು ಎಂದು ಹೇಳಿದರು.ದಾನಿಗಳು ಮತ್ತು ಕಾಫಿ ಬೆಳೆಗಾರರಾದ ಅಳೆಮೆಂಗಡ ಮೋನಾ ಚೆಂಗಪ್ಪ ಮಾತನಾಡಿ, ಕ್ರಿಕೆಟ್ ಎಂಬುದು ಶಿಸ್ತುಬದ್ಧ ಕ್ರೀಡೆಯಾಗಿದೆ. ಲೆದರ್‌ಬಾಲ್‌ನಲ್ಲಿ ಆಟವಾಡುವುದರಿಂದ ಜಿಲ್ಲೆ, ರಾಜ್ಯ ಮತ್ತು ದೇಶ ಹಾಗೂ ಅಂತರ್ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬಹುದಾಗಿದೆ. ಕೊಡವ ಕ್ರಿಕೆಟ್ ಅಕಾಡೆಮಿ ಈ ಪ್ರಯೋಗವು ಹೆಚ್ಚು ಹೆಚ್ಚು ಕ್ರಿಕೆಟ್ ಪಟುಗಳನ್ನು ಹುಟ್ಟುಹಾಕುವ ವೇದಿಕೆಯಂತೆ. ಮುಂದಿನ ದಿನಗಳಲ್ಲಿ ಅಯೋಜಿಸುವ ಪ್ರತಿಯೋಂದು ಕ್ರಿಕೆಟ್ ಪಂದ್ಯಕ್ಕೆ ನನ್ನಿಂದಾಗುವ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿದರು.ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕರ‍್ಸನ್ ಕಾರ್ಯಪ್ಪ ಅದ್ಯಕ್ಷೆತ ವಹಿಸಿ ಮಾತನಾಡಿ, ಅಕಾಡೆಮಿಯು ಸುಮಾರು ೨೦ ವರ್ಷಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಅಯೋಜಿಸಕೊಂಡು ಬರುತ್ತಿದ್ದು. ಲೇದರ್ ಬಾಲ್ ಕ್ರಿಕೆಟ್‌ಗೆ ಉತ್ತೇಜನ ಹಾಗೂ ಕೊಡವ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಪ್ರಥಮ ಭಾರಿಗೆ ಪ್ರಯೋಗದಂತೆ ಅಂತರ್ ಕೊಡವ ಸಮಾಜಗಳ ನಡುವಿನ ಪಂದ್ಯಾಟವನ್ನು ಅಯೋಜಿಸಲಾಗಿದೆ. ಎಲ್ಲ ಕೊಡವ ಸಮಾಜಗಳ ಸಹಕಾರ, ದಾನಿಗಳ ನೆರವು ಮತ್ತು ಅಕಾಡೆಮಿಯ ಸದಸ್ಯರ ಅವಿರತ ಶ್ರಮದಿಂದ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಕಾಫಿ ಬೆಳೆಗಾರರು, ದಾನಿಗಳಾದ ಕೊಟ್ಟಂಗಡ ಕೆ. ಜೋಯಪ್ಪ, ಮಾದಂಡ ತಿಮ್ಮಯ್ಯ, ಹಿರಿಯರಾದ ನಾಯಡ ವಾಸು ನಂಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಕೊಕ್ಕಂಗಡ ರಂಜನ್ ಸ್ವಾಗತಿಸಿದರು. ಕಾಂಡೇರ ಡಾನ್ ಕುಶಾಲಪ್ಪ ನಿರೂಪಿಸಿದರು. ಮಾಚಂಗಡ ಸೋಮಣ್ಣ ಅವರು ವಂದಿಸಿದರು.