ಇನ್ಮೇಲೆ ದಾವಣಗೆರೆಯಲ್ಲಿ ಮುರುಘಾ ಶ್ರೀ ವಾಸ್ತವ್ಯ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಜೈಲಿಂದ ಬಿಡುಗಡೆ ನಂತರ ಚಿತ್ರದುರ್ಗದಿಂದ ನೇರವಾಗಿ ದಾವಣಗೆರೆಗೆ ಬಂದ ಮುರುಘಾ ಶರಣರುಶಿವಯೋಗಾಶ್ರಮಕ್ಕೆ ಭೇಟಿ, ವಿರಕ್ತ ಮಠದಲ್ಲಿ ತಂಗಲಿರುವ ಶ್ರೀ । ಹೆಚ್ಚು ಮಾತಾಡದೇ ಮೌನಕ್ಕೆ ಶರಣು

ಕನ್ನಡಪ್ರಭ ವಾರ್ತೆ ದಾವಣಗೆರೆ

ಪೋಕ್ಸೋ ಕಾಯ್ದೆಯಡಿ ಕಳೆದ 14 ತಿಂಗಳಿನಿಂದಲೂ ಜೈಲಿನಲ್ಲಿದ್ದ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಮಂಜೂರುದ ಬೆನ್ನಲ್ಲೇ ಜೈಲಿನಿಂದ ಹೊರ ಬಂದ ನಂತರ ಸೀದಾ ದಾವಣಗೆರೆಗೆ ಆಗಮಿಸಿದ್ದಾರೆ.

ನಗರದ ಶ್ರೀ ಶಿವಯೋಗಿ ಮಂದಿರಕ್ಕೆ ಆಗಮಿಸಿದ ಮುರುಘಾ ಶರಣರಿಗೆ ಭಕ್ತಾದಿಗಳು, ವಿವಿಧ ಸಮಾಜಗಳು, ಸಂಘಟನೆಗಳ ಮುಖಂಡರು ಹಾರಹಾಕಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮದಿಂದ ಬರ ಮಾಡಿಕೊಂಡರು.

ನಂತರ ಶ್ರೀ ಶಿವಯೋಗಾಶ್ರಮ ಆವರಣದಲ್ಲಿ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳು, ಲಿಂಗೈಕ್ಯ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಕರ್ತೃ ಗದ್ದುಗೆ ನಮಿಸಿದ ಶ್ರೀ ಮುರುಘಾ ಶರಣರು ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನಕ್ಕೆ ಶರಣರಾಗಿದ್ದರಲ್ಲದೇ, ಬಂದ ಕೆಲ ಹೊತ್ತಿನಲ್ಲೇ ಸೀದಾ ದೊಡ್ಡಪೇಟೆಯ ಶ್ರೀ ವಿರಕ್ತ ಮಠಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಯೇ ವಾಸ್ತವ್ಯ ಮಾಡಲು ನಿರ್ಧರಿಸಿದ್ದಾರೆ.

ಮುರುಘಾ ಶರಣರು ಬರುತ್ತಿದ್ದಂತೆ ಭಕ್ತಾದಿಗಳು ಬಸವಣ್ಣನ ಪರ ಜಯಘೋಷ, ಬಸವೇ, ಬಸವಣ್ಣನೇ, ಜಯದೇವ ಎಂಬ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಅನೇಕ ಭಕ್ತಾದಿಗಳು ಶ್ರೀ ಮುರುಘಾ ಶರಣರ ಕಾಲಿಗೆ ಬಿದ್ದು, ಆಶೀರ್ವಾದವನ್ನೂ ಪಡೆದರು. ಯಾರೊಂದಿಗೂ ಶರಣರು ಹೆಚ್ಚು ಮಾತನಾಡದೇ, ಮೌನವಾಗಿದ್ದುದು ದಾವಣಗೆರೆಯಲ್ಲಿ ಇದೇ ಮೊದಲು ಎಂಬುದಾಗಿ ಭಕ್ತರು ತಮ್ಮ ಸಂಕಟ ತೋಡಿಕೊಂಡರು.

ದಾವಣಗೆರೆಯಲ್ಲಿ ಶ್ರೀಗಳ ವಾಸ್ತವ್ಯ ಖುಷಿ ತಂದಿದೆ: ಮಾಜಿ ಶಾಸಕ ಶಿವಶಂಕರ

ದಾವಣಗೆರೆ: ಜಾಮೀನಿನ ಮೇಲೆ ಹೊರ ಬಂದ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸದ್ಯಕ್ಕೆ ಇಲ್ಲಿನ ವಿರಕ್ತ ಮಠದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ನಗರದ ಶ್ರೀ ಶಿವಯೋಗಿ ಮಂದಿರಕ್ಕೆ ಚಿತ್ರದುರ್ಗದಿಂದ ನೇರವಾಗಿ ಬಂದು ತಲುಪಿದ ಶ್ರೀ ಮುರುಘಾ ಶರಣರಿಗೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಇತರೆ ಸ್ವಾಮೀಜಿಗಳು ಜೊತೆಗೆ ಹೆಜ್ಜೆ ಹಾಕಿದರು. ಸ್ಥಳೀಯ ಭಕ್ತರು ಹೂವಿನ ಮಾಲೆಗಳನ್ನು ಹಾಕಿ, ಸಿಹಿ ತಿನ್ನಿಸುವ ಮೂಲಕ ಶರಣರಿಗೆ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ ಹರಿಹರ ಮಾಜಿ ಶಾಸಕ ಎಚ್.ಎಸ್‌.ಶಿವಶಂಕರ, ಗುರುಗಳು ಬೆಂಗಳೂರು ಅಥವಾ ಬೇರೆಡೆ ಹೋಗಬಹುದೆಂದು ಭಾವಿಸಿದ್ದೆವು. ದಾವಣಗೆರೆಯಲ್ಲಿ ವಾಸ್ತವ್ಯ ಮಾಡುತ್ತಿರುವುದು ಖುಷಿ ತಂದಿದೆ. ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಹೆಸರು ಪಡೆದ ಜಿಲ್ಲೆ ಇದು. ಇಲ್ಲಿಯೇ ನೀವು ತಂಗುತ್ತಿರುವುದು ನಮ್ಮೆಲ್ಲರಿಗೂ ಸಮಾಧಾನ ತಂದಿದೆ ಎಂದರು.

ಬೆಂಗಳೂರು ಅಥವಾ ಬೇರೆ ಜಿಲ್ಲೆಗಳಲ್ಲಿ ನೀವು ವಾಸ್ತವ್ಯ ಮಾಡುತ್ತೀರೆಂದು ಕೆಲವರು ಭಾವಿಸಿದ್ದರು. ಆದರೆ, ನೀವು ದಾವಣಗೆರೆ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ವಾಸ್ತವ್ಯ ಮಾಡುತ್ತಿದ್ದು, ಭಕ್ತರಿಗೆ ಸಂತಸ ತಂದಿದೆ ಎಂದು ಶಿವಶಂಕರ್ ಹೇಳಿದಾಗ ಶ್ರೀ ಮುರುಘಾ ಶರಣರು, ಹೌದು ದಾವಣಗೆರೆ ಸಾಂಸ್ಕೃತಿಕ ನಗರಿ. ಇಲ್ಲಿಯೇ ನಾವು ವಾಸ್ತವ್ಯ ಹೂಡುತ್ತಿದ್ದೇನೆ ಎಂದಷ್ಟೇ ಪ್ರತಿಕ್ರಿಯಿಸಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀಮಠದ ಎಸ್.ಓಂಕಾರಪ್ಪ, ಎಂ.ಜಯಕುಮಾರ, ಯಾದವ ಸಮಾಜದ ಮುಖಂಡ ಬಾಡದ ಆನಂದರಾಜ ಇತರರು ಇದ್ದರು.

ಪ್ರತಿಕ್ರಿಯೆಗೆ ಮುರುಘಾ ಶರಣರ ನಕಾರ : ಹೇಳಬೇಕಾದ್ದನ್ನು ವಕೀಲರು ಹೇಳಿದ್ದಾರೆ, ನಾನು ಹೆಚ್ಚು ಮಾತನಾಡಲು ಇಷ್ಟಪಡಲ್ಲ...ದಾವಣಗೆರೆ: ಈಗಿನ ಸಂದರ್ಭದಲ್ಲಿ ನಾವು ಮೌನವಾಗಿದ್ದೇವೆ. ಯಾವುದನ್ನೂ ನಾವು ಮಾತನಾಡುವುದಿಲ್ಲ. ನಾವು ಮೌನವಾಗಿರುತ್ತೇವೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲವನ್ನೂ ವಕೀಲರು ನಿಮಗೆ ಹೇಳಿರುತ್ತಾರೆ. ಹಾಗಾಗಿ ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದರು.

ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ನಾನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದೇನೆ. ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಏನನ್ನೂ ಈಗಲೇ ಮಾತನಾಡುವುದಿಲ್ಲ. ವಿಚಾರಣೆ ನಡೆಯುತ್ತಿದೆ. ನಮ್ಮ ವಕೀಲರು ಸಹ ಹೆಚ್ಚು ಮಾತನಾಡದಂತೆ ಸೂಚನೆ ನೀಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಜಾಮೀನು ಸಿಕ್ಕಿದೆ ಎಂದು ಅವರು ತಿಳಿಸಿದರು. ಎಲ್ಲರಿಗೂ ಒಳ್ಳೆಯದು ಮಾಡಿ. ಮಾಧ್ಯಮದವರ ಸಹಕಾರ ಇರಲಿ. ಒಳಿತಾಗಲಿ ಎಂದಷ್ಟೇ ನನ್ನ ಹಾರೈಕೆಯಾಗಿದೆ ಎಂದ ಶರಣರು ಬೇರೆ ಯಾವುದೇ ವಿಚಾರಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಲಿಲ್ಲ. ನಿಮ್ಮ ವಿರುದ್ಧ ಷಡ್ಯಂತ್ರ ನಡೆದಿದೆಯೇ ಎಂಬ ಪ್ರಶ್ನೆಯೂ ಉತ್ತರಿಸಲು ಮುರುಘಾ ಶರಣರು ನಿರಾಕರಿಸಿದರು.

ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆಯೆಂಬ ಸಮಾಧಾನ ಮುಖದಲ್ಲಿ ವ್ಯಕ್ತವಾದರೂ, ಮನಸ್ಸಿನಲ್ಲಿ ನೋವು ಹೆಪ್ಪುಗಟ್ಟಿದಂತೆ ಮುರುಘಾ ಶರಣರು ಕಂಡು ಬಂದರು. ಭಕ್ತರಿಗೆ ಸಂದೇಶ ನೀಡಿ ಎಂದಾಗಲೂ ಶರಣರು ಸ್ಪಂದಿಸಲಿಲ್ಲ. ಆಗ ಜೊತೆಗೆ ಹಾಗೂ ಅಕ್ಕಪಕ್ಕ ಇದ್ದವರು ಈಗಾಗಲೇ ಶರಣರು ಸಂದೇಶ ನೀಡಿದ್ದಾರೆ. ಮತ್ತೆ ಸಂದೇಶ ನೀಡುವುದಿಲ್ಲವೆನ್ನುವ ಮೂಲಕ ಶರಣರು ಮುಂದಡಿ ಇಡಲು ಅನುವು ಮಾಡಿಕೊಟ್ಟರು.

Share this article