ಗದಗ: ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವ ಮನೋಭಾವ ಹೆಚ್ಚುತ್ತಿದೆ. ಆದರೆ ಇಂಥ ಬೇಜವಾಬ್ದಾರಿಗಳನ್ನು ತೊರೆದು ಇದೇ ನಮ್ಮ ಕೊನೆ ದಿನ ಎಂದು ಕಾರ್ಯಪ್ರವೃತ್ತರಾದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಎಲುವು-ಕೀಲು ತಜ್ಞ ಡಾ. ಪ್ರಕಾಶ ಸಂಕನೂರ ಹೇಳಿದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಸತತ ಪರಿಶ್ರಮವಿದ್ದರೆ ಅದೃಷ್ಟ ತಾನಾಗಿಯೇ ಒಲಿದು ಬರುತ್ತದೆ. ಪ್ರಯತ್ನ ಮತ್ತು ಪರಿಶ್ರಮಗಳೆಂಬ ಎರಡು ಚಕ್ರಗಳು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸಿನ ಕಡೆಗೆ ಸಾಗಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಕ್ರಮಿಸುವ ಯಶಸ್ಸು ಇತರರಿಗೆ ಮೈಲಿಗಲ್ಲಾಗಬೇಕು ಎಂದರು.
ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಗುರಿ ಹೊಂದುವುದು ಅವಶ್ಯಕವಾಗಿದ್ದು, ಸತತ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ವಿಶ್ವಗುರು ಬಸವೇಶ್ವರರ ವಚನ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಇಂದಿನ ಪಾರ್ಲಿಮೆಂಟ್ ವ್ಯವಸ್ಥೆಗೆ ಬಸವೇಶ್ವರರ ಅನುಭವ ಮಂಟಪವೇ ತಳಹದಿಯಾಗಿದೆ. ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ಬಸವ ತತ್ವಗಳನ್ನು ಕೇವಲ ನುಡಿಯಲ್ಲಿ ತೋರದೇ ನಡೆಯಲ್ಲಿ ತೋರಿದ ಮಹಾನ್ ಸಂತರಾಗಿದ್ದು, ಶ್ರೀಗಳು ಲಿಂಗೈಕ್ಯರಾದ ಸಮಯದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ ಅವರು ಶ್ರೀಗಳನ್ನು ಅಂತಾರಾಷ್ಟ್ರೀಯ ಸಂತ ಎಂದು ಕರೆದಿದ್ದು ಸ್ಮರಣೀಯವಾಗಿದೆ ಎಂದರು.ಈ ವೇಳೆ ಲಕ್ಕುಂಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೈ.ಎಚ್. ತಕ್ಕಲಕೋಟಿ ಹಾಗೂ ಸಿ.ಎಸ್. ಪಾಟೀಲ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಜಿ. ಕೊಲ್ಮಿ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತೋಂ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.