ಯಲ್ಲಾಪುರ: ಮಲೇರಿಯಾ ನಿಯಂತ್ರಣದಲ್ಲಿ ಇಲ್ಲಿಯವರೆಗೆ ಯಲ್ಲಾಪುರ ತಾಲೂಕಿನ ಎಲ್ಲಾ ಖಾಸಗಿ ವೈದ್ಯರು ಹಾಗೂ ಡಯಾಗ್ನೋಸ್ಟಿಕಗಳ ಸಿಬ್ಬಂದಿ ಒಳ್ಳೆಯ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲೂ ಅಗತ್ಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಹೇಳಿದರು.
ಪ್ರಾ.ಆ.ಕೇಂದ್ರ ದೇಹಳ್ಳಿಯ ವೈದ್ಯಾಧಿಕಾರಿ ಡಾ. ಗಿರೀಶಗೌಡ್ರ ಉಪನ್ಯಾಸ ನೀಡಿ, ರಾಜ್ಯದಲ್ಲಿ ೨೦೨೭ ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಹೊಂದಲಾಗಿದೆ. ಈ ದಿಸೆಯಲ್ಲಿ ಕೈಗೊಳ್ಳಲಾದ ಚಟುವಟಿಕೆಗಳ ಪರಿಣಾಮ ಕಳೆದ ಮೂರು ವರ್ಷಗಳಿಂದ ರಾಜ್ಯ ಮಲೇರಿಯಾ ನಿವಾರಣೆ ಹಂತದಲ್ಲಿದೆ. ಇದೇ ವೇಗದಲ್ಲಿ ಕಾರ್ಯ ನಿರ್ವಹಿಸಿ ಶೂನ್ಯ ಮಲೇರಿಯಾ ಸ್ಥಿತಿ ತಲುಪಿ ಕೊನೆಯ ಮೈಲುಗಲ್ಲನ್ನು ತಲುಪುವುದು ನಮ್ಮೆಲ್ಲರ ಜವಾಬ್ದಾರಿ ಎ೦ದರು.
"ಮಲೇರಿಯಾ ಕೊನೆಗೊಳಿಸಲು ಸಂಕಲ್ಪ ಮಾಡೋಣ : ನಮಗಿದು ಸಾಧ್ಯವಿದೆ, ನಾವು ಇದನ್ನು ಮಾಡಲೇಬೇಕು " ಎಂಬ ಧ್ಯೇಯ ವಾಕ್ಯದೊಂದಿಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.ಡಾ.ವಿಶಾಲ ಪಂಡಿತ ಹಾಗೂ ಡಾ. ಸತೀಶ ಭಟ್ಟ ಕಣ್ಣಿ ಅತಿಥಿಗಳಾಗಿ ಭಾಗವಹಿಸಿದರು. ಐ.ಎಂ.ಎ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಎಲ್ಲಾ ವೈದ್ಯಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿ ಸಿಬ್ಬಂದಿಗಳು ಸಹಕರಿಸಿದರು. ಟಿ.ಎಚ್.ಓ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ ಸ್ವಾಗತಿಸಿ, ವಂದಿಸಿದರು.