ಸಾಯುವಾಗಲೂ ಸಮಾಜದ ಬಗ್ಗೆ ಯೋಚಿಸಿದ್ದ ಲೀಲಾಧರ ಶೆಟ್ಟಿ !

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಎಲ್‌ಐಸಿ ಕಮಿಷನ್‌ನಿಂದ ಬರುವ ಹಣವನ್ನು ಶಾಲೆ ಅಭಿವೃದ್ಧಿಗೆ ಬಳಸುವಂತೆ ಡೆತ್‌ನೋಟ್‌ನಲ್ಲಿ ಉಲ್ಲೇಖ. ಎಲ್ಐಸಿಯಿಂದ ತನಗೆ ಸಿಗಲಿರುವ ಕಮಿಷನ್ ಹಣದಲ್ಲಿ ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿ, ಅಲ್ಲಿನ ಮಕ್ಕಳಿಗೆ ತನ್ನ ಪ್ರೀತಿಯನ್ನು ತೋರಿಸಿ, ಊರಿನ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಮುಗಿಸಿ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಪು

ಮಂಗಳವಾರ ರಾತ್ರಿ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಸಮಾಜಸೇವಕ ಲೀಲಾಧರ ಶೆಟ್ಟಿ ಅವರು ಸಾವಿನ ಸಂದರ್ಭದಲ್ಲಿಯೂ ಸಮಾಜದ ಹಿತವನ್ನೇ ಬಯಸಿದ್ದು, ಇದೀಗ ಅವರ ಡೆತ್ ನೋಟ್‌ನಿಂದ ಬಯಲಾಗಿದೆ. ಎಲ್ಐಸಿ ಏಜೆಂಟರಾಗಿದ್ದ ಅವರು, ಎಲ್ಐಸಿಯಿಂದ ತನಗೆ ಸಿಗಲಿರುವ ಕಮಿಷನ್ ಹಣದಲ್ಲಿ ತಾನು ಕಲಿತ ಕರಂದಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿ, ಅಲ್ಲಿನ ಮಕ್ಕಳಿಗೆ ತನ್ನ ಪ್ರೀತಿಯನ್ನು ತೋರಿಸಿ, ಊರಿನ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಮುಗಿಸಿ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ಮಾತ್ರವಲ್ಲ ತಾನು ಯಾರಿಗೆಲ್ಲಾ ಹಣ ನೀಡಲಿಕ್ಕಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದು, ಅದನ್ನು ಎಲ್ಐಸಿ ಕಮಿಷನ್ ನಿಂದ ಬರುವ ಹಣದಿಂದ ವಾಪಸ್‌ ನೀಡುವಂತೆ ತಿಳಿಸಿದ್ದಾರೆ. ಪತ್ರದ ಆರಂಭದಲ್ಲಿ ನನ್ನನ್ನು ಕ್ಷಮಿಸಿ, ಮಾನಕ್ಕಿಂತ ಪ್ರಾಣ ದೊಡ್ಡದಲ್ಲ ಎಂದು ಬರೆದಿರುವ ಅವರು, ಅವಮಾನಕ್ಕಂಜಿ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ಕಳಿಲ್ಲದ ಅವರು ಹೆಣ್ಣುಮಗವನ್ನು ದತ್ತು ತೆಗದುಕೊಂಡಿದ್ದರು. ಪಿಯುಸಿ ವಿದ್ಯಾರ್ಥಿನಿಯಾಗಿರುವ ಆಕೆ ಪತ್ರವೊಂದನ್ನು ಬರೆದಿಟ್ಟು ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಈ ಪತ್ರದಲ್ಲಿ ಆಕೆ ಲೀಲಾಧರ ಶೆಟ್ಟಿ - ವಸುಂಧರಾ ಶೆಟ್ಟಿ ದಂಪತಿಯ ಮಾನಕ್ಕೆ ಕುಂದಾಗುವ ವಿಷಯವನ್ನು ಬರೆದಿಟ್ಟಿದ್ದು, ಇದೇ ಅವರು ಈ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣವಾಗಿದೆ. ಆಕೆಯ ಪತ್ರವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆಕೆಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಇದು ಸಾಕುಮಗಳ ಪತ್ರವೇ ? ಈ ನಡುವೆ ಲೀಲಾಧರ ಶೆಟ್ಟಿ ಅವರ ಸಾಕುಮಗಳು ಬರೆದಿಟ್ಟದೆನ್ನಲಾದ ಪತ್ರವೊಂದು ಕಾಪು ಪೊಲೀಸರ ಕೈಗೆ ಸಿಕ್ಕಿದೆ. ಅದರಲ್ಲಿ ತಾನು ಗರ್ಭಣಿಯಾಗಿದ್ದು, ತನಗೆ ಮಗು ಬೇಕು, ಅದಕ್ಕಾಗಿಯೇ ಮನೆ ಬಿಡುತ್ತಿದ್ದೇನೆ ಎಂಬ ವಿಷಯವನ್ನು ಉಲ್ಲೇಖಿಸಲಾಗಿದೆ. ಆದರೆ ಅದು ಆಕೆಯದ್ದೇ ಪತ್ರ ಎಂದು ಪೊಲೀಸರು ಖಚಿತಪಡಿಸಿಲ್ಲ.

Share this article