ಕನ್ನಡಪ್ರಭ ವಾರ್ತೆ ಮೈಸೂರು
ಎಡಪಂಥೀಯ ಸಾಹಿತಿಗಳು ಡಬಲ್ ಗೇಮ್ ಆಡುತ್ತಿದ್ದಾರೆ. ಎಡಪಂಥೀಯ ಸಾಹಿತಿಗಳದ್ದು ಡಬಲ್ ಗೇಮ್ ಮನಸ್ಥಿತಿ. ಇದು ಹಲವು ಬಾರಿ ಸಾಬೀತಾಗಿದೆ. ತತ್ವ, ಸಿದ್ಧಾಂತಗಳ ವಿಚಾರದಲ್ಲೂ ಎಡಪಂಥೀಯ ಸಾಹಿತಿಗಳು ದ್ವಿಮುಖ ನಿಲುವು ಹೊಂದಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಡಪಂಥೀಯ ಸಾಹಿತಿಗಳಲ್ಲಿ ಡಬಲ್ ಗೇಮ್ ತುಂಬಾ ಇರುತ್ತದೆ. ಪಶ್ಚಿಮಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಮಕ್ಕಳು ಬಂಡವಾಳಶಾಹಿಗಳಾಗಿ ಏನಾದರೂ ಮಾಡಬಹುದು. ಇವರು ಮಾತ್ರ ಎಡಪಂಥೀಯ ವಿಚಾರಧಾರೆ ನಡೆಸುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಂಗಾಳದಲ್ಲಿ ಇರುವಷ್ಟು ಬಡತನ ದೇಶದ ಬೇರಿನ್ಯಾವ ರಾಜ್ಯದಲ್ಲೂ ಇಲ್ಲ. ಎಡಪಂಥೀಯತೆ ಅನ್ನೋದು ಬರೀ ಮೋಸ. ನನ್ನನ್ನು ಇವರೆಲ್ಲ ಬಂಡವಾಳಶಾಹಿ ಅಂತಾರೆ.
ಅದಿಲ್ಲದಿದ್ದರೆ ದೇಶದ ಬೆಳವಣಿಗೆ ಆಗುವುದಿಲ್ಲ ಎನ್ನುವುದು ಅವರು ಅರಿತುಕೊಳ್ಳಬೇಕು. ಎಡಪಂಥೀಯರೆಲ್ಲ ಅಪ್ರಾಮಾಣಿಕರು ಎಂದು ಕಿಡಿಕಾರಿದರು.
ಬಿಟ್ಟಿ ಗ್ಯಾರಂಟಿಗಳಿಂದಆರ್ಥಿಕ ಪರಿಸ್ಥಿತಿ ಹದಗೆಡಲಿದೆ
ರಾಜ್ಯ ಸರ್ಕಾರದ ಬಿಟ್ಟಿ ಗ್ಯಾರಂಟಿಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಇದೇ ವೇಳೆ ಅಭಿಪ್ರಾಯಪಟ್ಟರು.
ಕಳೆದ ಬಾರಿ ರಾಜ್ಯ ಸರ್ಕಾರದಲ್ಲಿ ಬಿಜೆಪಿಯವರು ಸರಿಯಾಗಿ ನಡೆದುಕೊಳ್ಳಲಿಲ್ಲ. ಅದನ್ನು ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು. ಕಾಂಗ್ರೆಸ್ ಸರ್ಕಾರದ ಬಿಟ್ಟಿ ಗ್ಯಾರಂಟಿಗಳು ರಾಜ್ಯದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ.
ರಾಜ್ಯ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ. ಕೇಂದ್ರದಿಂದ ಬಂದ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಆರೋಪಿಸಿದರು.