ನಾಗರಾಜ ಎಸ್.ಬಡದಾಳ್
ಕಳೆದ 4 ಅವಧಿಗೆ ಸತತವಾಗಿ ಆಯ್ಕೆಯಾದ ಸಂಸದ ಜಿ.ಎಂ.ಸಿದ್ದೇಶ್ವರ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಸಿದ್ದೇಶ್ವರ್‌ಗೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ ನೇತೃತ್ವದ 11 ಜನರ ಗುಂಪು ಸದ್ಯಕ್ಕಂತೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ರಾಧಾಮೋಹನ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮಧ್ಯ ಪ್ರವೇಶದಿಂದ ಸಿಟ್ಟು ಶಮನವಾದಂತೆ ತೋರುತ್ತಿದೆ.
ಬಿಜೆಪಿ ನಾಯಕರ ಮನವೊಲಿಕೆಯಾದರೂ ಸಂಧಾನ ಸಭೆಯಲ್ಲಿ ಎರಡೂ ಗುಂಪಿನವರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸದಾ ಸೆಡ್ಡು ಹೊಡೆದು ಬಂದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ ಬರೆದ ಅತೃಪ್ತರ ಗುಂಪು ರಾಜ್ಯಾಧ್ಯಕ್ಷರಿಗೆ ನೀಡಿದೆ. ಈ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ. ಗಾಯತ್ರಿ ಸಿದ್ದೇಶ್ವರ್ ಟಿಕೆಟ್ ಘೋಷಿಸಿದ್ದು ಬದಲಿಸಲು ಸಾಧ್ಯವಿಲ್ಲವೆಂಬ ನಾಯಕರ ಹೇಳಿಕೆ ನಂತರ ಅತೃಪ್ತರ ಗುಂಪು ತಂಡ ಯಶವಂತರಾವ್ ವಿರುದ್ಧ ಕ್ರಮಕ್ಕೆ ಪತ್ರ ಬರೆದಿದೆ. ಯಶವಂತರಾವ್ ವಿರುದ್ಧ ಕ್ರಮವಾದರೆ, ಸಿದ್ದೇಶ್ವರ್‌ಗೆ ಪಾಠ ಕಲಿಸಿದಂತೆ ಎಂಬ ಲೆಕ್ಕಾಚಾರ ಇದರ ಹಿಂದೆ ಇದೆ ಎಂಬ ಮಾತು ಕಮಲ ಪಕ್ಷದ ಅಂಗಳದಲ್ಲೇ ಕೇಳಿ ಬರುತ್ತಿದೆ.ದಿವಂಗತ ಜಿ.ಮಲ್ಲಿಕಾರ್ಜುನಪ್ಪ ದಾವಣಗೆರೆ ಕ್ಷೇತ್ರಕ್ಕೆ ಸ್ಪರ್ಧಿಸಿದಾಗಿನಿಂದಲೂ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಸಂಸದ ಜಿ.ಎಂ.ಸಿದ್ದೇಶ್ವರ ಜೋಡಿ ಎತ್ತಿನಂತೆ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ, ಭದ್ರ ನೆಲೆ ಒದಗಿ ಸಿದವರು. ಆಗಿನಿಂದಲೂ ಸಿದ್ದೇಶ್ವರ ಜೊತೆಗೆ ನೆರಳಿನಂತೆ ನಿಂತು ಕಾಂಗ್ರೆಸ್ಸಿಗೆ ಉತ್ತರ ನೀಡುತ್ತಿದ್ದ ಯಶವಂತರಾವ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಬಗ್ಗೆ ಅನೇಕರಿಂದ ತೀವ್ರ ಆಕ್ಷೇಪ, ವಿರೋಧ ವ್ಯಕ್ತವಾಗುತ್ತಿದೆ. ನರೇಂದ್ರ ಮೋದಿ ಪ್ರಧಾನಿ ಆಗಬೇಕೆನ್ನುವ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಕಾರ್ಯಕರ್ತರೂ ರೋಸಿದ್ದಾರೆ. ತುಂಬಿದ ಮನೆಯಂತಿದ್ದ, ಬಿಜೆಪಿ ಅಧಿಕಾರ ಇದ್ದಾಗ ಜಿಲ್ಲೆಯಿಂದ ಆಯ್ಕೆಯಾಗಿದ್ದ ಪ್ರತಿ ಶಾಸಕರಿಗೂ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಆ ಒಗ್ಗಟ್ಟು, ಶಿಸ್ತು ಏನಾಯ್ತು? ಅಂತಹ ಸುವರ್ಣ ದಿನಗಳನ್ನು ಕಂಡ ಬಿಜೆಪಿ ಈಗ ಮುದುಡಿದ ತಾವರೆ ಆಗದಿರಲಿ ಎಂಬುದು ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯವಾಗಿದೆ.ಅತೃಪ್ತ ನಾಯಕರ ಗುಂಪಿನ ಅಸಮಾಧಾನ ಉರಿಯುತ್ತಿದ್ದಾಗಲೇ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಮ್ಮ ಪಾಡಿಗೆ ತಾವೆಲ್ಲರಿಗೂ ಅಣ್ಣ ಅಂತಲೇ ಕರೆಯುತ್ತೇನೆ. ಎಲ್ಲರೂ ನನ್ನ ಪ್ರಚಾರಕ್ಕೆ ಬಂದೇ ಬರುತ್ತಾರೆಂಬ ವಿಶ್ವಾಸಇದೆ ಎನ್ನುತ್ತಾ, ದಾವಣಗೆರೆ, ಚಿತ್ರದುರ್ಗ ಅವಳಿ ಜಿಲ್ಲೆಗಳ ಮಠಗಳಿಗೆ ತೆರಳಿ, ಮಠಾಧೀಶರ ಆಶೀರ್ವಾದ ಪಡೆಯುತ್ತಾ, ತಮ್ಮ ಪಾಡಿಗೆ ಮುಖಂಡರು, ಕಾರ್ಯಕರ್ತರ ಜೊತೆಗೆ ಪ್ರಚಾರ ಕೈಗೊಂಡಿದ್ದಾರೆ. ಪುಣ್ಯಕ್ಷೇತ್ರ,ಧಾರ್ಮಿಕ ಸ್ಥಳಗಳಿಗೂ ಹೋಗಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು, ಪಾಲಿಕೆಯ ಮೊದಲ ಅವದಿಯ 22 ಜನ ಮಾಜಿ ಸದಸ್ಯರ ಗುಂಪು ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆಯೆಂದು ಹೊಟೆಲ್ ವೊಂದರಲ್ಲಿ ಮಧ್ಯಾಹ್ನ ಭೋಜನ ಕೂಟದ ಹೆಸರಲ್ಲಿ ಸಭೆ ನಡೆಸಿ, ಚರ್ಚಿಸಿದ್ದು ಬಿಜೆಪಿಗೆ ಮತ್ತಷ್ಟು ತಲೆ ನೋವಿಗೆ ಕಾರಣವಾಗಿದೆ.ಇತ್ತ ಡಾ.ಪ್ರಭಾ ಪ್ರಚಾರ, ಅತ್ತ ವಿನಯ್ ಪ್ರವಾಸ!
ಯಾರನ್ನೂ ದೂಷಿಸುವುದು, ಟೀಕಿಸುವುದು, ಆರೋಪ ಮಾಡುವುದು ಬೇಡ. ಅಭಿವೃದ್ಧಿ ಕಾರ್ಯ, ಜನಪರ ವಿಚಾರ ಮುಂದಿಟ್ಟುಕೊಂಡು ಮತ ಕೇಳೋಣ ಎನ್ನುವ ಮೂಲಕ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಪುಣ್ಯಕ್ಷೇತ್ರಗಳು, ದೇವಸ್ಥಾನಗಳು, ಮಠಗಳಿಗೆ ತೆರಳುತ್ತಿದ್ದಾರೆ. ವಿವಿಧ ಸಮುದಾಯಗಳ ಮಠಗಳಿಗೆ ಆಯಾ ಸಮಾಜದ ಮುಖಂಡರು, ಕಾರ್ಯಕರ್ತರೊಂದಿಗೆ ತೆರಳುತ್ತಿದ್ದಾರೆ.ಜಗಳೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್‌ರ ಪುತ್ಥಳಿಗೆ ಶುಕ್ರವಾರ ಮಾಲಾರ್ಪಣೆ ಮಾಡಿ, ಭರ್ಜರಿ ರೋಡ್ ಶೋ ಮೂಲಕ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ ಭಾಗವಹಿಸಿದ್ದರು. 3-4 ದಿನದ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ದಾವಣಗೆರೆಯವರಲ್ಲವೆಂದಿದ್ದರಿಂದ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಟಿಕೆಟ್ ಸಿಕ್ಕಿತು ಎಂಬುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದರು. ಸಹಜವಾಗಿಯೇ ಇದು ವಿನಯಕುಮಾರ ಮತ್ತು ಬೆಂಬಲಿಗರ ಬೇಸರಕ್ಕೂ ಕಾರಣವಾಗಿದೆ.
ದಾವಣಗೆರೆ:
ಪಾಲಿಕೆ ಮಾಜಿ ಮೇಯರ್, ಮಾಜಿ ಉಪ ಮೇಯರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಮಾಜಿ ಸದಸ್ಯೆಯರ ಪತಿಯಂದಿರು ಭೋಜನ ಕೂಟದ ಹೆಸರಿನಲ್ಲಿ ಜಿಲ್ಲಾ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆ, ತಮ್ಮನ್ನು ಅಲಕ್ಷಿಸುತ್ತಿರುವ ಪಕ್ಷದ ಬಗ್ಗೆ ಸಮಾಲೋಚನೆ ಮಾಡಿದರು.