ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಶನಿವಾರ ಆಡಳಿತಾಧಿಕಾರಿಗಳಾದ ಮಂಡ್ಯ ಉಪವಿಭಾಗಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮದ್ದೂರು ಪಟ್ಟಣಕ್ಕೆ 24*7 ಯೋಜನೆಯಡಿ ನೀರು ಪೂರೈಕೆಯಲ್ಲಿ ಉಂಟಾಗಿರುವ ಲೋಪದ ಬಗ್ಗೆ ಸದಸ್ಯರು ಪಕ್ಷಾತೀತವಾಗಿ ಆರೋಪಿಸಿದರು.
ಮಳವಳ್ಳಿ ತಾಲೂಕು ಬಾಚನಹಳ್ಳಿಯಿಂದ ಮದ್ದೂರು ಪಟ್ಟಣಕ್ಕೆ ಕಾವೇರಿ ನೀರು ಪೂರೈಕೆ ಆಗುವ ವೇಳೆ ಕೆಲವು ಗ್ರಾಮಗಳಲ್ಲಿ ಅನಧಿಕೃತವಾಗಿ ಸಂಪರ್ಕ ಪಡೆದುಕೊಂಡಿದ್ದಾರೆ. ಇದರಿಂದ ಮದ್ದೂರಿಗೆ 24*7 ಪ್ರಕಾರ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ನದಾಫ್ ಸಭೆಗೆ ವಿವರಣೆ ನೀಡಿದರು.ಸದಸ್ಯರ ಆರೋಪದ ನಡುವೆ ಮಧ್ಯ ಪ್ರವೇಶ ಮಾಡಿದ ಶಾಸಕ ಉದಯ್, ಮದ್ದೂರು ಪಟ್ಟಣಕ್ಕೆ ಕಾವೇರಿ ನೀರು ಪೂರೈಸುವ ಮಾರ್ಗದಲ್ಲಿ ಅನಧಿಕೃತವಾಗಿ ಸಂಪರ್ಕ ಪಡೆದಿರುವ ಗ್ರಾಮಗಳ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಗ್ರಾಮಗಳ ಪಿಡಿಒ ಗಳಿಗೆ ಪತ್ರ ಬರೆದು ಪುರಸಭೆ ಷರತ್ತಿನ ಅನ್ವಯ ನೀರು ಪಡೆಯಲು ಮುಂದಾಗುವಂತೆ ತಾಪಂ ಇಒ ಸಂದೀಪ್ ಅವರಿಗೆ ಸೂಚನೆ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕೆಮ್ಮಣ್ಣುನಾಲೆಗೆ ಒಂದುವರೆ ಕಿಲೋಮೀಟರ್ ಕವರ್ ಡೆಕ್ ನಿರ್ಮಾಣ, ನಾಲೆಯ ಎರಡು ಬದಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಒಳಚರಂಡಿ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಸಭೆಗೆ ಉತ್ತರಿಸಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ, ಸದಸ್ಯರಾದ ಎಂಐ ಪ್ರವೀಣ್, ಆದಿಲ್, ಕೋಕಿಲ ಆರುಣ, ವನಿತಾ, ಎಸ್.ಮಹೇಶ್, ಸಚಿನ್ ಮತ್ತಿತರ ಸದಸ್ಯರು ಭಾಗವಹಿಸಿದ್ದರು.