ಅಪರಾಧ ಮುಕ್ತ ಜೀವನಕ್ಕೆ ಕಾನೂನು ಅರಿವು ಅಗತ್ಯ

KannadaprabhaNewsNetwork | Published : Apr 29, 2024 1:34 AM

ಸಾರಾಂಶ

ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿತ್ಯ ಜೀವನದಲ್ಲಿ ಅಗತ್ಯವಾದ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ, ವಿವಾದ ರಹಿತ ಜೀವನ ನಡೆಸಬಹುದು.

ಕನ್ನಡಪ್ರಭ ವಾರ್ತೆ ಕೋಲಾರಮನುಷ್ಯನ ಜೀವನ ನಿರ್ವಹಣೆಗೆ ನೀರು, ಆಹಾರದಷ್ಟೇ ಕಾನೂನು ಅರಿವು ಅತಿ ಮುಖ್ಯವಾಗಿದ್ದು, ಅದರ ಪಾಲನೆಯಿಂದ ನೆಮ್ಮದಿ ಹಾಗೂ ಅಪರಾದ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ಕರೆ ನೀಡಿದರು.ನಗರ ಹೊರವಲಯದ ತೊರದೇವಂಡಹಳ್ಳಿ ಸಿಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಿತ್ಯ ಬದುಕಿನಲ್ಲಿ ಕಾನೂನು

ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿತ್ಯ ಜೀವನದಲ್ಲಿ ಅಗತ್ಯವಾದ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ, ವಿವಾದ ರಹಿತ ಜೀವನ ನಡೆಸಬಹುದು. ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ ಎಂದ ಅವರು ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಯುದಾಯದ ಸಹಕಾರ ಅಗತ್ಯವಿದೆ, ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಬಾಲ್ಯದಲ್ಲೇ ಸಂಸಾರ ಬಂಧನ ಬೇಡ

ಓದುವ ವಯಸ್ಸಿನಲ್ಲಿ ಸಂಸಾರ ಬಂಧನಕ್ಕೆ ಒಳಪಡಿಸುವುದು ಅಪರಾಧವಾಗಿದ್ದು, ಮದುವೆ ಮಾಡಿಸಿದ ಪುರೋಹಿತರೂ ಸೇರಿದಂತೆ ಛತ್ರ ನೀಡಿದವರಿಗೂ,ಮದುವೆಗೆ ಹೋದವರ ಮೇಲೂ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿ, ನಿಮ್ಮ ಪೋಷಕರಿಗೆ ಈ ಕುರಿತು ಅರಿವು ನೀಡಿ ಎಂದು ಕಿವಿಮಾತು ಹೇಳಿದರು.ಭ್ರೂಣ ಲಿಂಗ ಪತ್ತೆ ಮಾಡುವುದು ಸಹಾ ಅಪರಾಧವಾಗಿದ್ದು,ಕಠಿಣ ಶಿಕ್ಷೆ ಇದೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಸರ್ಕಾರ ಕಾನೂನು ಮಾಡಿದ್ದು, ಇದರ ಕುರಿತು ನೀವು ಅರಿತು ಸಮಾಜಕ್ಕೂ ತಿಳಿಸಿಕೊಡಿ. ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಕುರಿತು ಅರಿವು ನೀಡಿದ್ದು, ಲಿಂಗ ಪತ್ತೆ ನಿಷೇಧ ಕಾಯಿದೆ, ಬಾಲ್ಯವಿವಾಹ ನಿಷೇಧ, ಹೆಣ್ಣು ಭ್ರೂಣ ಹತ್ಯೆ ಕಾಯಿದೆ, ಬಾಲಕಾರ್ಮಿಕ ನಿಷೇಧ, ಹಾಗೂ ಮೋಟಾರ್ ವಾಹನ ಕಾಯಿದೆಗಳ ಕುರಿತು ಅರಿವು ಮೂಡಿಸಲಾಯಿತು.

ದುಶ್ಚಟಗಳಿಂದ ದೂರವಿರಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಸ್.ಎನ್.ಚಂದ್ರಶೇಖರ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ, ಮಾದಕ ವಸ್ತು, ತಂಬಾಕು ವಸ್ತುಗಳ ಸೇವನೆ ಮಾಡದಿರಿ, ನಿಮ್ಮನ್ನು ಅಪರಾಧ ಕೃತ್ಯಕ್ಕೆ ಈ ವಸ್ತುಗಳು ಪ್ರೇರೇಪಿಸುತ್ತವೆ ಎಂದು ಎಚ್ಚರಿಸಿದರು.ಎನ್‌ಎಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಪಂ ಯೋಜನಾ ನಿರ್ದೇಶಕ ರವಿಚಂದ್ರ, ಕಾರ್ಯದರ್ಶಿ ಗೋವಿಂದೇಗೌಡ ಇದ್ದರು.

Share this article