ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕೊಪ್ಪಳ
ಜನಸಾಮಾನ್ಯರಿಗೆ ಕಾನೂನು ಅರಿವು ಅತ್ಯವಶ್ಯಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸಿ. ಹೇಳಿದರು.
ಮಂಗಳವಾರ ಕೊಪ್ಪಳ ನಗರಸಭೆ ಹಿಂದುಗಡೆಯ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಕೊಪ್ಪಳ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಧಾನ ಸೆ ಸಮಾಧಾನ ಎಂಬ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಧಾನ ಸೆ ಸಮಾಧಾನ ಎಂದರೆ ಕಾನೂನು ಮೂಲಕ ಪರಿಹಾರ ಪಡೆಯುವುದೇ ಆಗಿದೆ. ಈ ಹಿನ್ನೆಲೆ ಎಲ್ಲರಿಗೂ ಕಾನೂನು ಅರಿವು ಮೂಡಿಸಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವೈವಾಹಿಕ ಸಂಬಂಧಗಳಲ್ಲಿ ಬರುವ ತೊಂದರೆ, ಆಸ್ತಿಗೆ ಸಂಬಂಧಿಸಿದ ಪ್ರಕರಣಗಳು, ಜೀವನಾಂಶ ಪ್ರಕರಣಗಳಲ್ಲಿ ಬರುವ ಅಪ್ರಾಪ್ತ ಮಕ್ಕಳನ್ನು ನೋಡಿಕೊಳ್ಳದೆ ಇರುವುದು, ಹೆಂಡತಿ ಮತ್ತು ತಂದೆ ತಾಯಿಯನ್ನು ನೋಡಿಕೊಳ್ಳದಿದ್ದಾಗ ಯಾವ ರೀತಿ ಕಾನೂನು ನೆರವು ಪಡೆಯಬೇಕು ಎಂಬುದರ ಬಗ್ಗೆ ಎಲ್ಲರೂ ತಿಳಿದುಕೊಂಡಿರಬೇಕು ಎಂದರು.
ಕಾನೂನು ಮೂಲಕ ಜನರ ಕಷ್ಟ, ಸಮಸ್ಯೆಗಳನ್ನು ಬಗೆಹರಿಸುವುದು ಕಾನೂನು ಸೇವಾ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದ್ದು, ಜನರಿಗೆ ಕಾನೂನು ಅರಿವು ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಕೊಪ್ಪಳ ತಾಲೂಕು ಪಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರೆವೆರೆಂಡ್ ಜೆ.ರವಿಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸರಸ್ವತಿದೇವಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಎಸ್. ದರಗದ, ಪ್ರಧಾನ ದಿವಾಣಿ ನ್ಯಾಯಾಧೀಶೆ ಭಾಗ್ಯಲಕ್ಷ್ಮೀ, ಹಿರಿಯ ವಕೀಲ ಶ್ಯಾಮಸುಂದರ ಹುಣಸಿಮರದ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭ ಕೊಪ್ಪಳ ಕಲ್ವಾರಿ ಚಾಪಲ್ ಟ್ರಸ್ಟ್ ಮುಖ್ಯಸ್ಥ ರೆವೆರೆಂಡ್ ನವನೀತ ಕುಮಾರ, ಕ್ರಿಸ್ತ ಜ್ಯೋತಿ ಇಸಿಐ ಚರ್ಚ್‌ನ ಕಾರ್ಯದರ್ಶಿ ಶಾಂತರಾಜ್ ಎಂ. ಮುರ್ತೋಟಿ ಹಾಗೂ ಚರ್ಚ್‌ನ ಸಿಬ್ಬಂದಿ ಹಾಗೂ ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.