ನೂತನವಾಗಿ ನರಸಿಂಹರಾಜಪುರ ರೈಲ್ವೆ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಎನ್.ಆರ್.ಪುರಕ್ಕೆ ರೈಲು ಮಾರ್ಗ ಪಡೆಯುವುದೇ ನಮ್ಮ ಹೋರಾಟ ಸಮಿತಿ ಗುರಿಯಾಗಿದೆ ಎಂದು ನರಸಿಂಹರಾಜಪುರದ ನೂತನ ರೈಲ್ವೇ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಂಜು.ಎನ್.ಗೌಡ ತಿಳಿಸಿದರು.

ಭಾನುವಾರ ಬಸ್‌ ನಿಲ್ದಾಣ ಸಮೀಪದ ನಿಧಿ ಸ್ವಸಹಾಯ ಸಂಘದ ಕಚೇರಿ ಆವರಣದಲ್ಲಿ ನಡೆದ ನರಸಿಂಹರಾಜಪುರ ರೈಲ್ವೇ ಹೋರಾಟ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ ಬಹಳ ವರ್ಷಗಳ ಹಿಂದೆಯೇ ಭದ್ರಾವತಿಯಿಂದ ಎನ್.ಆರ್.ಪುರಕ್ಕೆ ಇದ್ದ ಟ್ರ್ಯಾಂಬೆ ರೈಲು ಮಾರ್ಗಕ್ಕೆ ಪಹಣಿ ಸಹ ಇದೆ. ಈ ರೈಲು ಮಾರ್ಗಕ್ಕೆ ಭೂ ಸ್ವಾಧೀನವಾಗಲಿ, ಅರಣ್ಯ ಇಲಾಖೆ ಅನುಮತಿ ಬೇಕಿಲ್ಲ. ಹೀಗಾಗಿ ಶಿವಮೊಗ್ಗ- ಮಂಗಳೂರಿನ ರೈಲ್ವೆ ಮಾರ್ಗ ಶಿವಮೊಗ್ಗ- ಭದ್ರಾವತಿ- ಎನ್.ಆರ್.ಪುರ- ಕೊಪ್ಪ- ಶೃಂಗೇರಿ ಮೂಲಕ ಮಂಗಳೂರು ತಲುಪುವ ಯೋಜನೆ ಕಾರ್ಯಗತವಾಗ ಬೇಕು ಎಂಬ ಉದ್ದೇಶವೇ ಈ ಹೋರಾಟ ಸಮಿತಿ ಮುಖ್ಯ ಗುರಿ. ತಾಲೂಕಿನ ಅಭಿವೃದ್ಧಿಗೆ ರೈಲು ಬೇಕೆನ್ನುವ ನಮ್ಮ ಹೋರಾಟಕ್ಕೆ ಪಕ್ಷಾತೀತ, ಜಾತ್ಯತೀತವಾಗಿ,ಸಂಘ ಸಂಸ್ಥೆಗಳು, ಸಾರ್ವಜನಿಕರು ಬೆಂಬಲ ನೀಡ ಬೇಕೆಂದು ಮನವಿ ಮಾಡಿದರು.

ನರಸಿಂಹರಾಜಪುರ ರೈಲ್ವೆ ಹೋರಾಟ ಸಮಿತಿ ಗೌರವ ಸಂಚಾಲಕ ಸತೀಶ್ ಆಚಾರ್ ಮಾತನಾಡಿ 1960 ರಲ್ಲಿ ಲಕ್ಕವಳ್ಳಿಯಲ್ಲಿ ಭದ್ರಾನದಿಗೆ ಅಣೆಕಟ್ಟು ನಿರ್ಮಿಸಿದಾಗ ಎನ್.ಆರ್.ಪುರದ ಹಲವು ಹಳ್ಳಿಗಳು ಮುಳುಗಡೆಯಾಗಿದೆ. ಸರ್ಕಾರ ಪ್ರತಿಯಾಗಿ ನರಸಿಂಹರಾಜಪುರ ಅಭಿವೃದ್ಧಿಗೆ ಯಾವುದೇ ಪರ್ಯಾಯ ಯೋಜನೆ ನೀಡಿಲ್ಲ. ಈಗ ಈ ರೈಲು ಮಾರ್ಗ ಕೂಡ ತಪ್ಪಿಹೋಗುತ್ತಿದೆ. ಶಿವಮೊಗ್ಗದಿಂದ ಮಂಗಳೂರಿಗೆ ಹೊಸ ರೈಲು ಯೋಜನೆ ಈ ಹಿಂದೆ ಎನ್.ಆರ್. ಪುರದ ಮೂಲಕ ಹೋಗುವ ಯೋಜನೆಇತ್ತು. ಆದರೆ, ಕಾರಣಾಂತರದಿಂದ ಈ ಮಾರ್ಗ ಶಿವಮೊಗ್ಗದಿಂದ ಅರಸಾಳು- ಹೊಸನಗರ- ರಿಪ್ಪಿನ್‌ಪೇಟೆ- ತೀರ್ಥಹಳ್ಳಿ- ಶೃಂಗೇರಿ ಮೂಲಕ ಮಂಗಳೂರು ತಲುಪುವ ಯೋಜನೆಯಾಗಿ ಬದಲಾಗುತ್ತಿದೆ. ಈ ಬಗ್ಗೆ ಈ ಭಾಗದಲ್ಲಿ ಸಾರ್ವಜನಿಕವಾಗಿ ಯಾವುದೇ ಹೋರಾಟ, ಪ್ರತಿರೋಧಗಳು ನಡೆಯುತ್ತಿಲ್ಲ. ಆದ್ದರಿಂದ ಜನರನ್ನು ಸಂಘಟಿಸಿ, ಜನರಲ್ಲಿ ಜಾಗೃತಿ ಮೂಡಿಸಿ ಎನ್.ಆರ್.ಪುರದ ಮೂಲಕವೇ ರೈಲು ಶೃಂಗೇರಿಗೆ ಹೋಗುವುದರಿಂದ ಹೆಚ್ಚು ಅನುಕೂಲವೆಂದು ಸಭೆಯಲ್ಲಿ ನರಸಿಂಹರಾಜಪುರ ರೈಲ್ವೆ ಹೋರಾಟ ಸಮಿತಿ ರಚಿಸಲಾಯಿತು.ಪದಾಧಿಕಾರಿಗಳು: ಗೌರವ ಸಂಚಾಲಕ ಸತೀಶ್ ಆಚಾರ್, ಪ್ರಧಾನ ಸಂಚಾಲಕ ಮಂಜು.ಎನ್.ಗೌಡ, ಸಹ ಸಂಚಾಲಕ ವಿಜು.ಪಿ.ಜೆ, ಕಾರ್ಯಸಂಚಾಲಕ ಎಂ.ಎಸ್.ಅರ್ಜುನ್, ಆರ್ಥಿಕ ಸಂಚಾಲಕ ಸಾದತ್‌ಸಮೀರ್, ಮಾಧ್ಯಮ ಸಂಚಾಲಕರು ಶೆಟ್ಟಿಕೊಪ್ಪ ಜೋಯಿ ಬ್ರೋ, ಸಾಮಾಜಿಕ ಜಾಲತಾಣ ಸಂಚಾಲಕರು ಜೋಬಿ ಚರಿಯನ್ , ಸಲಹಾ ಸಂಚಾರಕರಾಗಿ ಅಭಿನವ ಗಿರಿರಾಜ್, ನಾಗೇಶ್‌ರೆಡ್ಡಿ, ಪಿ.ಕೆ.ಸಜಿ, ಕಿರಣ್‌ ಆಚಾರ್ ನೇಮಕವಾಗಿದ್ದಾರೆ.