ಎಸ್‌ಸಿಪಿ, ಟಿಎಸ್‌ಪಿ ಹಣ ವರ್ಗಾವಣೆ ತಡೆಗೆ ಕಾನೂನು ಹೋರಾಟ

KannadaprabhaNewsNetwork |  
Published : Aug 13, 2026, 01:15 AM IST
2 | Kannada Prabha

ಸಾರಾಂಶ

ವಿವಿಧ ಸಾಲಸೌಲಭ್ಯಕ್ಕಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯ ದೊರೆತಿಲ್ಲ. ವಸತಿ ಸಮಸ್ಯೆ ಬಗೆಹರಿದಿಲ್ಲ. ಆದರೆ, ಪರಿಶಿಷ್ಟರಿಗೆ ಮೀಸಲಿಟ್ಟ ಸಾವಿರಾರು ಕೋಟಿ ಎಲ್ಲಿ ಹೋಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ.ಜಾತಿ, ಪ.ಪಂಗಡಗಳ ಕಲ್ಯಾಣಕ್ಕೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಮೀಸಲಿಟ್ಟ ಹಣದ ವರ್ಗಾವಣೆ ತಡೆಗೆ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ರೋಟರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಜಾರಿಗೊಂಡ ಬಳಿಕ 2.89 ಲಕ್ಷದ ಕೋಟಿ ರು. ಹಣ ನೀಡಲಾಗಿದೆ. ಈ ಹಣದ ಯಾರಿಗೆ ನೀಡಲಾಗಿದೆ ಎಂಬುದರ ಬಗ್ಗೆ ದತ್ತಾಂಶ ಇಲ್ಲ ಎಂದರು.

ವಿವಿಧ ಸಾಲಸೌಲಭ್ಯಕ್ಕಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯ ದೊರೆತಿಲ್ಲ. ವಸತಿ ಸಮಸ್ಯೆ ಬಗೆಹರಿದಿಲ್ಲ. ಆದರೆ, ಪರಿಶಿಷ್ಟರಿಗೆ ಮೀಸಲಿಟ್ಟ ಸಾವಿರಾರು ಕೋಟಿ ಎಲ್ಲಿ ಹೋಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗುತ್ತಿದೆ. ಅಲ್ಲದೇ, ತಮ್ಮ ಇಚ್ಛಾನುಸಾರ ಹಣ ಕೊಡುತ್ತಿದ್ದಾರೆ. ಇದು ಕಾಯಿದೆ ಪ್ರಕಾರ ತಪ್ಪು. ಈ ಸಂಬಂಧಪಟ್ಟವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಮಂತ್ರಿ ನಿಯೋಜನೆ ಬಳಿಕ ಅವರೊಂದಿಗೆ ಚರ್ಚಿಸುತ್ತೇವೆ. ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ಕಾನೂನು ಹೋರಾಟ ಮಾಡುತ್ತೇವೆ. ಕೇವಲ ಜಾಹೀರಾತಿನಲ್ಲಿ ಸಾವಿರಾರು ಕೋಟಿ ಹಣ ಕೊಟ್ಟಿದ್ದೇವೆ ಎಂದು ವಂಚಿಸಿದರೆ ಸುಮ್ಮನಿರಲಾಗುವುದಿಲ್ಲ ಎಂದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಶೇ.50 ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟು, ಉಳಿಕೆ ಹಣವನ್ನು ಸಮುದಾಯಗಳ ಸಬಲೀಕರಣಕ್ಕೆ ಬಳಸಬೇಕು. ಗ್ಯಾರಂಟಿ ಯೋಜನೆಗಳಲ್ಲಿ ಎಸ್‌.ಸಿ, ಎಸ್‌.ಟಿ ಜನರಿಗೆ ಮಾತ್ರ ಅನುದಾನ ಬಳಸಬೇಕು ಎಂಬ ಒತ್ತಾಯ ಕೇಳಿಬಂತು.

ಸಂವಿಧಾನ ವಿರೋಧಿಗಳು, ಆರ್‌ಎಸ್‌ಎಸ್ ವಿರುದ್ಧ ತಳಮಟ್ಟದಿಂದ ಹೋರಾಟ ರೂಪಿಸುವ ಸಂಬಂಧ ಚರ್ಚೆ ಮಾಡಿದ್ದೇವೆ. ಅ. 14 ರಂದು ಅಂಬೇಡ್ಕರ್ ಧಮ್ಮ ಸ್ವೀಕಾರದ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಯೋಜಿಸುತ್ತೇವೆ. ಬಾಬಾ ಸಾಹೇಬರ ಪ್ರಬುದ್ಧ ಭಾರತ ನಿರ್ಮಾಣದ ಆಶಯದಂತೆ ಸಮಾವೇಶ ರೂಪಿಸುತ್ತೇವೆ ಎಂದರು.

ಆರ್ಥಿಕ ಮಾನದಂಡದ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂಬ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾವಳ್ಳಿ ಶಂಕರ್, ಸಂತೋಷ್ ಹೆಗ್ಡೆ ಅವರ ಮೀಸಲಾತಿ ವಿರುದ್ಧದ ಹೇಳಿಕೆ ಮೊದಲನೆಯದಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.

ಇಡಬ್ಲ್ಯೂಎಸ್ ಕೊಟ್ಟಾಗ ಸಂತೋಷ್ ಹೆಗ್ಡೆಯವರು ಯಾಕೇ ಸುಮ್ಮನಿದ್ದರು? ಎಂದು ಪ್ರಶ್ನಿಸಿದರು. ಮೀಸಲಾತಿ ಪ್ರಾತಿನಿಧ್ಯವೇ ಹೊರತು, ಬಡತನ ನಿರ್ಮೂಲನ ಕಾರ್ಯಕ್ರಮ ಅಲ್ಲ. ಮೀಸಲಾತಿ ಹಠಾವೋ ಬಿಜೆಪಿ ಕುತಂತ್ರ ಎಂದು ತಿಳಿಸಿದರು.

ಮುಖಂಡರಾದ ಇಂದಿರಾ ಕೃಷ್ಣಪ್ಪ, ಸುಂದರ ಮಾಸ್ಟರ್, ರಮೇಶ್ ದಕುಳಕಿ, ದೊಡ್ಡಿಂದುವಾಡಿ ಸಿದ್ದರಾಜು, ಈರೇಶ್ ಹೀರೇಹಳ್ಳಿ, ಮೈಸೂರು ಜಿಲ್ಲಾ ಸಂಚಾಲಕ ಮೆಲ್ಲಹಳ್ಳಿ ನಾರಾಯಣ, ರಾಮಣ್ಣ ಕಲ್ಲದೇವನಹಳ್ಳಿ, ಹುಸೇನಪ್ಪ, ಸಿದ್ದಪ್ಪ ಕಾಂಬ್ಳೆ, ಹಾಲೇಶಪ್ಪ, ಸಂಜೀವ್ ಕಂಬಗಿ, ಬನ್ನಹಳ್ಳಿ ಸೋಮಣ್ಣ, ನಿರ್ಮಲಾ, ದೊಡ್ಡಸಿದ್ದು ಹಾದನೂರು, ಕಳ್ಳಿಮುದ್ದನಹಳ್ಳಿ ಚಂದ್ರು, ವಾಟಾಳ್ ನಾಗರಾಜ್, ದೇವರಸನಹಳ್ಳಿ ಬಸವರಾಜು, ಬಲರಾಮ್ ಚಿಬ್ಬಗಹಳ್ಳಿ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಧಮ್ಮ ಅಶೋಕ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ 100 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆ
ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ