ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡ ಬಿ.ಆರ್.ರಘು, ಹೊನ್ನೆಮರದಹಳ್ಳಿ-ಬೊಮ್ಮೇನಹಳ್ಳಿ ಮಧ್ಯೆ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದು, ಇದನ್ನು ಗ್ರಾಪಂ ಪಿಡಿಓಗೆ ಪ್ರಶ್ನಿಸಿ, ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರೂ ಪಿಡಿಒ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದರು.
ಪಿಡಿಒ ನೀಡಿದ ದೂರನ್ನೇ ಬಂಡವಾಳ ಮಾಡಿಕೊಂಡ ಸಿಪಿಐ ರವೀಶ್ ಕಾಮಗಾರಿಗೆ ಆಕ್ಷೇಪಿಸಿದ ಗ್ರಾಮದ ಮಹಿಳೆಯರು, ಹಿರಿಯರು, ಪುರುಷರು, ಯುವ ಜನರನ್ನು ಅವಾಚ್ಯವಾಗಿ ನಿಂದಿಸಿ, ಮಹಿಳೆಯರ ಬಗ್ಗೆಯೂ ಕೇವಲವಾಗಿ ಮಾತನಾಡಿದ್ದಾರೆ. ಪಿಡಿಓ ನೀಡಿದ್ದ ದೂರಿಗೂ, ಅಟ್ರಾಸಿಟಿ ಕೇಸ್‌ಗೂ ಸಂಬಂಧವೇ ಇಲ್ಲ. ಆದರೂ, 16 ಜನರ ವಿರುದ್ಧ ಕೇಸ್ ಮಾಡಿ, ಎಲ್ಲರ ಮೇಲೂ ಅಟ್ರಾಸಿಟಿ ಕೇಸ್ ದಾಖಲಿಸುವ ಬೆದರಿಕೆಯನ್ನು ಸಿಪಿಐ ರವೀಶ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಅವೈಜ್ಞಾನಿಕ, ಕಳಪೆ ಕಾಮಗಾರಿ ಪ್ರಶ್ನಿಸಿದ್ದೇ ಅಪರಾಧವಾದರೆ ನಮ್ಮ ದೇಶದ ಸಂವಿಧಾನಕ್ಕೆ, ಕಾನೂನಿಗೆ ಬೆಲೆಯೇ ಇಲ್ಲವೇ? ನಮ್ಮ ಊರಿನ ಕಾಮಗಾರಿ ವಿಚಾರವನ್ನು ಚನ್ನಗಿರಿ ಸಿಪಿಐ ರವೀಶ್ ವೈಯಕ್ತಿಕವಾಗಿ, ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ಸಿಪಿಐ ರವೀಶ್ ದುರ್ವರ್ತನೆ, ದೌರ್ಜನ್ಯ, ಬೆದರಿಕೆ ಹಾಕುವ, ಅಟ್ರಾಸಿಟಿ ಕೇಸ್ ಧಮ್ಕಿ ಹಾಕುವುದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದರು.
ದೌರ್ಜನ್ಯಕ್ಕೊಳಗಾದ ಎಂಜಿನಿಯರಿಂಗ್ ಪದವೀಧರೆ, ಕಾನೂನು ವಿದ್ಯಾರ್ಥಿನಿ ವಿ.ಚಂದನಾ ಮಾತನಾಡಿ, ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿ, ಕಾಮಗಾರಿ ಅಡ್ಡಿಪಡಿಸಿದ್ದಾರೆಂದು ತಹಸೀಲ್ದಾರ್ ನ್ಯಾಯಾಲಯದಲ್ಲೂ ಸಿಪಿಐ ರವೀಶ್ ತಮ್ಮೂರಿನ ಜನರು, ಮಹಿಳೆಯರ ಮೇಲೂ ಕೇಸ್ ಮಾಡಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಪ್ರಶ್ನಿಸುವುದೆ ತಪ್ಪಾ? ಎಂದು ಪ್ರಶ್ನಿಸಿದರು.
ಹೊನ್ನೇಮರದಹಳ್ಳಿ ಗ್ರಾಮಸ್ಥರಾದ ಜಿ.ವಿ.ರುದ್ರೇಶ, ಜಿ.ಎನ್.ಲೋಕೇಶ್ವರಪ್ಪ, ಎಸ್.ಆರ್.ಶಾಂತವೀರಪ್ಪ, ಎಚ್.ಜಿ.ಉಮಾಪತಿ, , ಬೊಮ್ಮೇನಹಳ್ಳಿ ಪ್ರಸನ್ನಕುಮಾರ, ಎಲ್.ಎಸ್.ಚಂದ್ರಪ್ಪ, ಬಿ.ಜೆ.ಶಿವರಾಜ, ಎಚ್.ಜಿ.ಶಶಿಕುಮಾರ ಇತರರು ಇದ್ದರು.