ಪೆಟಾ ಸಂಸ್ಥೆ ರಿಟ್‌ ವಿರುದ್ಧ ಕಾನೂನು ಹೋರಾಟ: ಶಾಸಕ ಅಶೋಕ್‌

KannadaprabhaNewsNetwork |  
Published : Oct 23, 2024, 12:40 AM IST
11 | Kannada Prabha

ಸಾರಾಂಶ

ಕಂಬಳದ ಪರ ಸುಗ್ರಿವಾಜ್ಞೆ ಹೊರಡಿಸಿರುವುದು, ಐವರು ನ್ಯಾಯಾಧೀಶರಿದ್ದ ಸುಪ್ರೀಂ ಕೋರ್ಟ್ ಪೀಠ ಕಂಬಳದ ಪರ ತೀರ್ಪು ನೀಡಿದ್ದು ಇದೆಲ್ಲ ಚಾರಿತ್ರಿಕ ವಿದ್ಯಮಾನ. ಹೀಗಿರುವಾಗ ಕಂಬಳದ ವಿಚಾರದಲ್ಲಿ ಯಾವುದೇ ಆತಂಕವಿಲ್ಲ ಎಂದು ಶಾಸಕರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಬೆಂಗಳೂರಿನಲ್ಲಿ ಕಂಬಳ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ಪೆಟಾ ಸಂಸ್ಥೆ ವತಿಯಿಂದ ರಾಜ್ಯ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಲಾಗಿದೆ. ಇದರ ವಿರುದ್ಧ ನಾನು ನನ್ನ ವೈಯಕ್ತಿಕ ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಲಿದ್ದೇನೆ ಎಂದು ಪುತ್ತೂರು ಶಾಸಕ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳದ ರೂವಾರಿ ಅಶೋಕ್ ಕುಮಾರ್‌ ರೈ ಹೇಳಿದ್ದಾರೆ.

ಮಂಗಳವಾರ ಪುತ್ತೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪೆಟಾ ಸಂಸ್ಥೆಯವರು ಹೈಕೋರ್ಟ್ ಮೆಟ್ಟಿಲೇರಿದ್ದು ಗಮನಕ್ಕೆ ಬಂದಿದೆ. ಪೆಟಾ ರಿಟ್ ಸಲ್ಲಿಕೆ ಬೆನ್ನಲ್ಲೇ ನಾನು ಕೂಡಾ ವೈಯಕ್ತಿಕ ನೆಲೆಯಲ್ಲಿ ವಕೀಲರ ಮೂಲಕ ರಿಟ್ ಪಿಟಿಶನ್ ಹಾಕಿದ್ದೇನೆ. ಇದರಲ್ಲಿ ನನ್ನನ್ನೂ ಒಂದು ಪಾರ್ಟಿ ಮಾಡಬೇಕೆಂದು ಕೋರಿದ್ದೇನೆ. ಸರ್ಕಾರಿ ವಕೀಲರಿಗೆ ನ್ಯಾಯಾಂಗ ಹೋರಾಟದಲ್ಲಿ ನೆರವಾಗಲು ನಾನು ವಕೀಲರನ್ನು ನೇಮಿಸಿ ವಾದ ಮಂಡಿಸಲಿದ್ದೇನೆ ಎಂದರು.

ಹಿಂದೆ ಕಂಬಳದ ಪರ ಸರಕಾರ ಸುಗ್ರಿವಾಜ್ಞೆ ಹೊರಡಿಸುವ ಸಂದರ್ಭ ಸಲ್ಲಿಸಲಾದ ಅಫಿದವಿತ್‌ನಲ್ಲಿ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ ಎಂದು ಬರೆಯಲಾಗಿತ್ತು. ಇದೇ ಅಂಶವನ್ನು ಇಟ್ಟುಕೊಂಡು ಪೆಟಾದವರು ದ.ಕ., ಉಡುಪಿ ಹೊರತಾಗಿ ಬೇರೆ ಕಡೆ ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಕಂಬಳ ನಡೆಸಲಾಗುತ್ತಿದೆ ಎಂದು ಅಫಿದವಿತ್‌ನಲ್ಲಿ ತಿಳಿಸಿರುವುದ ನಿಜ, ಆದರೆ ಬೇರೆಲ್ಲೂ ಕಂಬಳ ನಡೆಸುವುದಿಲ್ಲ ಎಂದು ತಿಳಿಸಿಲ್ಲ. ಹೀಗಾಗಿ ಪೆಟಾದವರ ವಾದದ ಮುಂದೆ ನಾವು ಜಯ ಗಳಿಸುತ್ತೇವೆ ಎಂಬ ವಿಶ್ವಾಸವಿದೆ ಎಂದು ಅಶೋಕ್‌ ರೈ ಹೇಳಿದರು.

ಕಂಬಳದ ಪರ ಸುಗ್ರಿವಾಜ್ಞೆ ಹೊರಡಿಸಿರುವುದು, ಐವರು ನ್ಯಾಯಾಧೀಶರಿದ್ದ ಸುಪ್ರೀಂ ಕೋರ್ಟ್ ಪೀಠ ಕಂಬಳದ ಪರ ತೀರ್ಪು ನೀಡಿದ್ದು ಇದೆಲ್ಲ ಚಾರಿತ್ರಿಕ ವಿದ್ಯಮಾನ. ಹೀಗಿರುವಾಗ ಕಂಬಳದ ವಿಚಾರದಲ್ಲಿ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನಡೆಸಿದ್ದೇವೆ. ಅಲ್ಲಿ ಕಂಬಳ ನಡೆಸುವುದು ಕಷ್ಟ ನಿಜ. ಪೊಲೀಸ್ ಇಲಾಖೆಯೂ ಸೇರಿದಂತೆ ನಾನಾ ಇಲಾಖೆಗಳಿಂದ ಅನುಮತಿ ಬೇಕು. ಭಾರಿ ಮುಂಜಾಗ್ರತೆ ಬೇಕು. ಈ ಬಾರಿಯೂ ದಿನ ನಿಗದಿ ಮಾಡಿ ಕಂಬಳ ನಡೆಸಲು ಆಸಕ್ತರಿರುವವರು ಮುಂದೆ ಬರಲಿ ಎಂದು ಕಾಯುತ್ತಿದ್ದೇವೆ ಎಂದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!