ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಂಪನಿಗಳ ಪೈಕಿ, ಅನೇಕವು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಅಪಾಯಕಾರಿ ರಾಸಾಯನಿಕ -ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದರಿಂದ, ಪರಿಸರ-ಜಲ ಹದಗೆಟ್ಟು ಈ ಭಾಗದ ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಕ್ರಮ ಕೈಗೊಳ್ಳಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಷಕಾರಿ ಕಂಪನಿಗಳಿಗೆ ಮತ್ತೇ ಪರವಾನಗಿ ಕೊಡುತ್ತಿರುವುದು ಆತಂಕ ಮೂಡಿಸಿದೆ ಎಂದು ದೂರಿ " ಕಂಪನಿ ಹಠಾವೋ, ಕಡೇಚೂರು ಬಚಾವೋ " ಮತ್ತು ಬಳ್ಳಾರಿ ಜಿಲ್ಲೆ ಸಂಡೂರಿನ ಜನಸಂಗ್ರಾಮ ಪರಿಷತ್ ಹೋರಾಟ ಸಮಿತಿ ಜಂಟಿಯಾಗಿ ಕಾನೂನು ಸಮರಕ್ಕೆ ಮುಂದಾಗಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಸಲಹೆಗಳ ಮೇರೆಗೆ, ದೆಹಲಿ ಮೂಲದ ಪ್ರಖ್ಯಾತ ವಕೀಲರೊಬ್ಬರನ್ನು ಸಂಪರ್ಕಿಸಿ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಇಲಾಖೆಗೆ ಷರತ್ತುಗಳ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳ ವಿರುದ್ಧ ವಿವರವಾದ ದಾಖಲೆಗಳು, ಸಾಕ್ಷಿಗಳ ಸಮೇತ ದೂರು ನೀಡಿದೆ.ಕಡೇಚೂರು ಕೈಗಾರಿಕಾ ಪ್ರದೇಶದ ಸುಮಾರು 15ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಒಂದು ಲಕ್ಷಕ್ಕೂ ಅಧಿಕ ಜನರ ಜೀವಕ್ಕೆ ಹಾಗೂ ಜಲ-ಜೀವ ಸಂಕುಲಕ್ಕೆ ಮಾರಕವಾಗಿರುವ ಕಾರ್ಖಾನೆಗಳ ಪರಿಸರ ಪರವಾನಗಿ ರದ್ದತಿಗೆ ಮನವಿ ಮಾಡಿದ್ದಾರೆ. ಕಾರ್ಖಾನೆಗಳನ್ನು ಸ್ಥಾಪಿಸುವ ಮುನ್ನ ಭೂಸಂತ್ರಸ್ತರ ಜೊತೆ ಸರ್ಕಾರ ನಡೆಸಿದ ಒಪ್ಪಂದ ಹಾಗೂ ಈಗ ಒಪ್ಪಂದ ಉಲ್ಲಂಘನೆ ಪ್ರಕರಣಗಳನ್ನು ಹಾಗೂ ಪಂಚಾಯ್ತಿಗಳ ಠರಾವುಗಳನ್ನು ಮುಂದಿಟ್ಟುಕೊಂಡು, ಅರ್ಜಿ ಸಲ್ಲಿಸಲಾಗಿದೆ.
ಈ ಬಗ್ಗೆ ದೂರುಗಳನ್ನು ನೀಡಿದ್ದಾಗ್ಯೂ ಸರ್ಕಾರ ನಿರ್ಲಕ್ಷ್ಯ ತಾಳುತ್ತಿದೆ. ಕಣ್ಣೆದುರಿಗೇ ಕಂಪನಿಗಳು ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ನಡೆಸುತ್ತಿದ್ದರೂ, ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಇಂತಹ ವಿಷಕಾರಿ ಕೆಮಿಕಲ್ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿದ್ದು, ಜನರ ದೂರುಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಸೇರಿದಂತೆ ಆ ಭಾಗದ ಜನರ ಆರೋಗ್ಯದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ವೈದ್ಯಕೀಯ ವರದಿಗಳನ್ನು ದೂರಿನಲ್ಲಿ ಸಾಕ್ಷಿಗಳೆಂದು ಪರಿಗಣಿಸುವಂತೆ ಕೋರಲಾಗಿದೆ.ಈ ಹಿಂದೆ, ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿ, ಅಕ್ರಮ ಗಣಿಗಾರಿಕೆ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದ ಹಿರಿಯ ನ್ಯಾಯವಾದಿಗಳ ತಂಡ ಪ್ರಮುಖರೊಬ್ಬರು ಇದಕ್ಕೆ ಪೂರಕವಾಗಿ ಈ ಕಾನೂನು ಹೋರಾಟಕ್ಕೆ ಬೆಂಬಲಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳಿಗೆ ಮಣೆ ಹಾಕಿ, ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಉಚಿತ ಕಾನೂನು ಸಲಹೆ ಮೂಲಕ ಮುಂದಾಗಿದ್ದಾರೆ. ಮತ್ತೇ 3 ಸಾವಿರಕ್ಕೂ ಅಧಿಕ ಹೆಚ್ಚುವರಿ ಕೃಷಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದ ಸರ್ಕಾರದ ಕ್ರಮದ ಬಗ್ಗೆಯೂ ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಷರತ್ತುಗಳ ಉಲ್ಲಂಘಿಸಿದ ಆರೋಪದಡಿ, 27 ಕಂಪನಿಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅವುಗಳ ಬಗ್ಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು, ಹೆಚ್ಚುವರಿಯಾಗಿ ಮತ್ತೇ 30ಕ್ಕೂ ಹೆಚ್ಚು ಫಾರ್ಮಾ ಕಂಪನಿಗಳಿಗೆ ಅನುಮತಿ ಕೊಡುತ್ತಿರುವ ಹಿಂದಿನ ಸಂಶಯಗಳು ವ್ಯಕ್ತಪಡಿಸಲಾಗಿದೆ.ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಗಣಿಗಳ್ಳರ ವಿರುದ್ಧ ವಾದ ಮಂಡಿಸಿ, ಸಂತ್ರಸ್ತ ಜನರಿಗೆ ನ್ಯಾಯ ನೀಡಿಸುವ ನಿಟ್ಟಿನಲ್ಲಿ ಮುಂದಾಗಿದ್ದ ದೇಶದ ಹಿರಿಯ, ಪ್ರಖ್ಯಾತ ನ್ಯಾಯವಾದಿಯೊಬ್ಬರು ಕಡೇಚೂರು ವಿಚಾರವಾಗಿ ವಾದ ಮಂಡಿಸಲಿದ್ದಾರೆ. ಕಾನೂನು ಹೋರಾಟಕ್ಕೆ ಮುಂದಾಗಿ, ಅರ್ಜಿ ಸಲ್ಲಿಸಿದ್ದೇವೆ. ಸರ್ಕಾರ, ಮಂಡಳಿ, ಅಧಿಕಾರಿಗಳು ಮುಂತಾದವರ ವಿರುದ್ಧ ದೂರಲಾಗಿದೆ. ಇದಕ್ಕೆಂದು ಕಳೆದ ನಾಲ್ಕು ತಿಂಗಳುಗಳಿಂದ ಎಲ್ಲೆಡೆ ತಿರುಗಾಡಿ ಸಾಕ್ಷಿ ಕಲೆ ಹಾಕಿದ್ದೇವೆ.
- ಮಲ್ಲಿಕಾರ್ಜುನ ರೆಡ್ಡಿ ಚಾಗನೂರು, ಜನಸಂಗ್ರಾಮ ಪರಿಷತ್, ಬಳ್ಳಾರಿ.