
ಗದಗ: ಬಸವಾದಿ ಶರಣರ ವಚನಗಳು ಸಾರ್ವತ್ರಿಕ ಮನ್ನಣೆಯೊಂದಿಗೆ ಸರ್ವಸಮ್ಮತ ಮೌಲ್ಯಗಳ ಆಗರವಾಗಿದ್ದು, ಸಮಾಜದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಕಾನೂನಿನ ಬಲ ತಂದು ಅವುಗಳನ್ನು ಸಶಕ್ತೀಕರಣಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶ್ರೀಗಳ ಹೆಸರಿನಲ್ಲಿ ವಚನ ಪಾಠಶಾಲೆ ಉದ್ಘಾಟನೆ ಮಾಡಿದ್ದು ಸಂತಸದ ಸಂಗತಿ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳು ನಮ್ಮ ನಡುವೆ ಇದ್ದರೆ ರಾಜ್ಯ ಸರ್ಕಾರ ವಚನಗಳಿಗೆ ಕಾನೂನಿನ ಬಲತುಂಬಲು ಹೊರಟಿರುವ ನಡೆಯನ್ನು ಖಂಡಿತಾ ಶ್ಲಾಘಿಸುತ್ತಿದ್ದರು. ಬಸವತತ್ವಗಳ ಕಟ್ಟುನಿಟ್ಟಿನ ಪರಿಪಾಲಕರಾಗಿದ್ದ ಲಿಂ. ಸಿದ್ಧಲಿಂಗ ಶ್ರೀಗಳು ತೋಂಟದಾರ್ಯ ಮಠದ ಜಾತ್ರೆಗೆ ಹೊಸ ಭಾಷ್ಯ ಬರೆದು ಜಾತ್ರೆಗಳನ್ನು ಜನೋಪಯೋಗಿ ಹಾಗೂ ಸಮಾಜಮುಖಿಯಾಗಿ ಆಚರಿಸುವ ಪರಂಪರೆ ಹಾಕಿಕೊಟ್ಟರು. ಪುಸ್ತಕಗಳನ್ನು ಪ್ರಕಟಿಸುವ, ಹಂಚುವ ಮುಖೇನ ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಜಾತ್ರೆಗಳನ್ನು ಸಾಂಸ್ಕೃತಿಕವಾಗಿ ಮಾರ್ಪಡಿಸಿದರು.
ಹೆಸರಾಂತ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕುರಿತ ಗ್ರಂಥಗಳನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರೆತಿದೆ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕೇವಲ ಸಾಹಿತಿಯಲ್ಲ, ಬದಲಿಗೆ ಸಂಘ- ಸಂಸ್ಥೆಗಳು ಮಾಡುವ ಕಾರ್ಯವನ್ನು ಏಕವ್ಯಕ್ತಿಯಾಗಿ ನಿರ್ವಹಿಸಿದ್ದಾರೆ. ವಚನಗಳು ಕೇವಲ ಸಭೆ- ಸಮಾರಂಭಗಳ ಭಾಷಣದ ಉಲ್ಲೇಖಕ್ಕೆ ಸೀಮಿತವಾಗದೇ ಪ್ರತಿಯೊಬ್ಬರ ಬದುಕಿನಲ್ಲಿ ಜಾರಿಯಾದಾಗ ನಮ್ಮಷ್ಟು ಸುಸಂಸ್ಕೃತ ಸಮಾಜ ಬೇರೆಲ್ಲೂ ಇರುವುದಿಲ್ಲ ಎಂದರು.ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ, ಮಾತನಾಡಿ, ಸಿದ್ಧಲಿಂಗ ಶ್ರೀಗಳು ಪೂರ್ವಾಶ್ರಮದ ಹೆಸರು ಸಿದ್ಧರಾಮ. ಇಂದಿನ ನಮ್ಮ ಪೂಜ್ಯರ ಹೆಸರು ಸಿದ್ಧರಾಮ ಸ್ವಾಮಿಗಳು. ಹೀಗೆ ಲಿಂಗೈಕ್ಯ ಗುರುಗಳ ಪ್ರತಿರೂಪವೇ ಇಂದಿನ ಶ್ರೀಗಳಾಗಿದ್ದಾರೆ. ಅವರ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದಲ್ಲಿ ನನ್ನಿಂದ ಕಲ್ಯಾಣದ ಹಾದಿ ಗ್ರಂಥವನ್ನು ಬರೆಸಿದರು. ಇಂದಿನ ಅವರ ಜಯಂತಿಯಲ್ಲಿ ನನ್ನ ಕುರಿತು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮುಂತಾದವರು ಮಾತನಾಡಿದರು. ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ವಚನ ನೃತ್ಯ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನ ನೀಡಿದರು.