ಬಸವರಾಜ ಹಿರೇಮಠ
ಸಾಮಾಜಿಕ ಅನಿಷ್ಟಗಳನ್ನು ನಿಗ್ರಹಿಸಲು ಹಾಗೂ ಕಾನೂನು ಜ್ಞಾನ ಇಲ್ಲದವರಿಗೆ ಕಾನೂನು ಅರಿವು ಮೂಡಿಸುವ ಹಿನ್ನೆಲೆ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಕ್ಷರಶಃ ಉಚಿತ ಕಾನೂನು ಸಲಹೆಗಾರನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕಳೆದ ಮೂರು ವರ್ಷದಲ್ಲಿ ಜನರಿಗೆ ಕಾನೂನು ಅರಿವು, ಕಾನೂನುಬಾಹಿರ ಚಟುವಟಿಕೆ ನಿಗ್ರಹಿಸುವುದು ಮತ್ತು ದುರ್ಬಲ ವರ್ಗಗಳಿಗೆ ಉಚಿತ ಕಾನೂನು ನೆರವು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.ಮಾದಕ ವ್ಯಸನಕ್ಕೆ ಯುವಕರ ಬಲಿ, ಬಾಲ್ಯ ವಿವಾಹ, ಜೀತ ಪದ್ಧತಿ ಮತ್ತು ಬಾಲ ಕಾರ್ಮಿಕ ಪದ್ಧತಿ ಮುಂದುವರಿದಿರುವ ಹಿನ್ನೆಲೆ ಪ್ರಾಧಿಕಾರವು ಜಿಲ್ಲಾದ್ಯಂತ 600ಕ್ಕೂ ಹೆಚ್ಚು ಕಾನೂನು ಜಾಗೃತಿ ಕಾರ್ಯಕ್ರಮ ನಡೆಸಿದೆ. ವಿದ್ಯಾರ್ಥಿಗಳು ಸೇರಿ 1 ಲಕ್ಷ ಜನರಿಗೆ ಇದರ ಪ್ರಯೋಜನ ದೊರೆತಿದೆ.
ಪ್ರಾಧಿಕಾರದ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ, ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವು ಸರ್ಕಾರಿ ಉಪಕ್ರಮಗಳ ಹೊರತಾಗಿಯೂ, ಜಾಗೃತಿ ಕಾರ್ಯಕ್ರಮ ದುರ್ಬಲ ವರ್ಗವನ್ನು ತಲುಪಲು ವಿಫಲವಾಗುತ್ತವೆ. ಈ ಅಂತರ ನಿವಾರಿಸಲು, ಅನಿಷ್ಟ ಪದ್ಧತಿ ವಿರುದ್ಧ ಅರಿವು ಮೂಡಿಸಲು ಪ್ರಾಧಿಕಾರ ವಿವಿಧ ಸರ್ಕಾರಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುತ್ತಿದೆ. ಕಳೆದ 30 ತಿಂಗಳಲ್ಲಿ ಬಾಲ್ಯವಿವಾಹ ಮತ್ತು ಮಾದಕ ವ್ಯಸನದ ಮೇಲೆ ಕೇಂದ್ರೀಕರಿಸುವ 100 ಕಾರ್ಯಕ್ರಮ ನಡೆಸಿದ್ದು, ಇದು ಜನರಲ್ಲಿ ಸ್ವಲ್ಪ ಮಟ್ಟಿಗೆ ಜಾಗೃತಿ ಮೂಡಿಸಿದೆ ಎಂದರು.
ಈ ಕ್ರಮಗಳ ಯಶಸ್ಸಿನಿಂದ ಉತ್ತೇಜಿತವಾದ ಸುಪ್ರೀಂಕೋರ್ಟ್, ಅರಣ್ಯ ಪ್ರದೇಶ ಸಮೀಪದ ಹಳ್ಳಿಗಳಲ್ಲಿ ಮಾನವ-ಪ್ರಾಣಿ ಸಂಘರ್ಷದ ಕುರಿತು ಜಾಗೃತಿ ಮೂಡಿಸಲು ಪ್ರಾಧಿಕಾರಕ್ಕೆ ನಿರ್ದೇಶಿಸಿದೆ. ಸೇನಾ ಸಿಬ್ಬಂದಿ ಮತ್ತು ಅವರ ಕುಟುಂಬ ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ಗುರಿ ಹೊಂದಿರುವ ''''''''ವೀರ್ ಪರಿವಾರ್'''''''' ಕಾರ್ಯಕ್ರಮ ಆಯೋಜಿಸುವಂತೆಯೂ ಅದು ಪ್ರಾಧಿಕಾರವನ್ನು ಕೇಳಿದೆ. ಗೌರವ ಹತ್ಯೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದ್ದು ಅಂತಹ ಅಪರಾಧ ನಡೆದ ಪ್ರದೇಶಗಳಿಗೆ ಭೇಟಿ ನೀಡುವ ಪ್ರಾಧಿಕಾರ, ನಿಯಮಿತವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ದೊಡ್ಡಮನಿ ಹೇಳಿದರು.
ಮಕ್ಕಳು ಶಾಲೆಯಿಂದ ಹೊರಗುಳಿಯುವುದು ಕಳವಳಕಾರಿ ವಿಷಯ. ಗ್ರಾಮೀಣ ಪ್ರದೇಶದಲ್ಲಿ ಅನೇಕರು 8ನೇ ತರಗತಿ ಬಳಿಕ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಿ ಪ್ರಾಧಿಕಾರ ಈ ವರೆಗೆ 50ಕ್ಕೂ ಹೆಚ್ಚು ಶಾಲೆಗೆ ಭೇಟಿ ನೀಡಿ, ಉನ್ನತ ಶಿಕ್ಷಣದ ಮಹತ್ವ ಒತ್ತಿ ಹೇಳಿದೆ. ಯುವಕರು ಸಹ ಮಾದಕ ವ್ಯಸನದ ಬಲೆಗೆ ಬೀಳುತ್ತಿದ್ದಾರೆ. ಇದನ್ನು ತಡೆಯಲು ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಾಗೃತಿ ನಡೆಸುತ್ತಿದೆ. ಮಾದಕ ವಸ್ತುಗಳ ಬಳಕೆಯ ಹಾನಿಕಾರಕ ಪರಿಣಾಮ ಎತ್ತಿ ತೋರಿಸುತ್ತದೆ. ಮಾದಕ ವಸ್ತುಗಳ ಬಲಿಪಶುಗಳ ಪುನರ್ವಸತಿಗೂ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಉಚಿತ ಕಾನೂನು ನೆರವು