ಪೌರಾಣಿಕ ನಾಟಕಗಳು ಬದುಕಿಗೆ ಮಾರ್ಗದರ್ಶನ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Oct 14, 2024, 01:19 AM IST
೧೩ಕೆಎಂಎನ್‌ಡಿ-೨ ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಸಂಕ್ಷಿಪ್ತ ಮಹಾಭಾರತ ಅಥವಾ ಗದಾಯುದ್ದ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಶಾಸಕ ಹೆಚ್.ಟಿ.ಮಂಜು ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಪರಿವರ್ತನೆಗೆ ಪೌರಾಣಿಕ ನಾಟಕಗಳು ಪ್ರಭಾವ ಬೀರುತ್ತವೆ. ಟೀವಿ ಧಾರಾವಾಹಿ, ಸಿನಿಮಾ, ರೀಲ್ಸ್, ಯುಟ್ಯೂಬ್, ಫೇಸ್‌ಬುಕ್, ವಾಟ್ಸಾಪ್ ಹಾವಳಿಯ ನಡುವೆಯೂ ಪೌರಾಣಿಕ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಜನಮನ್ನಣೆಗೆ ಪಾತ್ರವಾಗಿವೆ. ಜನರೂ ಪೌರಾಣಿಕ ನಾಟಕಗಳ ಕಡೆ ಆಕರ್ಷಿತರಾಗಿ ಕಲಾವಿದರನ್ನು ಪ್ರೋತ್ಸಾಹಿಸಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೌರಾಣಿಕ ನಾಟಕಗಳು ಮನುಷ್ಯನ ಉತ್ತಮ ಬದುಕಿಗೆ ಮಾರ್ಗದರ್ಶನವಾಗಿವೆ. ನಾಟಕಗಳಲ್ಲಿ ಬರುವ ವಿವಿಧ ಪಾತ್ರಗಳಲ್ಲಿನ ಉತ್ತಮ ಸಾರವನ್ನು ಅರಿತು ಜೀವನ ನಡೆಸಿದರೆ ಮನುಷ್ಯ ಉತ್ತಮ ಜೀವನ ನಡೆಸಬಹುದು. ಇದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಅವರು ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ಕೃಪಾ ಪೋಷಿತ ನಾಟಕ ಮಂಡಳಿಯವರು ದಸರಾ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಂಕ್ಷಿಪ್ತ ಮಹಾಭಾರತ ಅಥವಾ ಭೀಮ-ದುರ್ಯೋದನ ಗದಾಯುದ್ದ ಎಂಬ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಪರಿವರ್ತನೆಗೆ ಪೌರಾಣಿಕ ನಾಟಕಗಳು ಪ್ರಭಾವ ಬೀರುತ್ತವೆ. ಟೀವಿ ಧಾರಾವಾಹಿ, ಸಿನಿಮಾ, ರೀಲ್ಸ್, ಯುಟ್ಯೂಬ್, ಫೇಸ್‌ಬುಕ್, ವಾಟ್ಸಾಪ್ ಹಾವಳಿಯ ನಡುವೆಯೂ ಪೌರಾಣಿಕ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಜನಮನ್ನಣೆಗೆ ಪಾತ್ರವಾಗಿವೆ. ಜನರೂ ಪೌರಾಣಿಕ ನಾಟಕಗಳ ಕಡೆ ಆಕರ್ಷಿತರಾಗಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಸಿನಿಮಾ, ಟಿವಿ ಧಾರಾವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕ ಎಂದೆಂದಿಗೂ ಜೀವಂತವಾಗಿರುತ್ತದೆ. ನಾಟಕಗಳನ್ನು ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸಬೇಕು. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಕಲಾವಿದರ ಬದುಕು ಸಂಕಷ್ಟದಲ್ಲಿದ್ದರೂ ತಮ್ಮಲ್ಲಿ ರಕ್ತಗತವಾದ ಕಲೆಯಿಂದ ಎಲ್ಲರ ಮನರಂಜಿಸುತ್ತಾರೆ. ಹಾಗಾಗಿ ಸಾರ್ವಜನಿಕರು ನಾಟಕಗಳನ್ನು ನೋಡಿ ಪ್ರೋತ್ಸಾಹಿಸುವ ಮೂಲಕ ಕಲಾವಿದರಿಗೆ ಶಕ್ತಿಯಾಗಿ ನಿಲ್ಲಬೇಕು ಎಂದರು.

ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಸಂಸ್ಕೃತಿ-ಪರಂಪರೆಯ ಪ್ರತಿ ಬಿಂಬಗಳಾಗಿರುವ ನಾಟಕ ಕಲೆಗಳನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿ ಗ್ರಾಮದಲ್ಲಿರುವ ಆಯಾಯ ಗ್ರಾಮ ದೇವತೆಗಳ ಹೆಸರಿನ ಕೃಪಾ ಪೋಷಿತ ನಾಟಕ ಮಂಡಳಿಗಳು ನಾಟಕಗಳನ್ನು ಕಲಿತು ಪ್ರದರ್ಶನ ಮಾಡುವ ಮೂಲಕ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮೆಣಸ ವಿ.ಎನ್.ಮಹಾದೇವೇಗೌಡ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಬಿ.ವಿ.ನಾಗೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಕ್ಕೋಸಹಳ್ಳಿ ಸುರೇಶ್, ಸೊಸೈಟಿ ನಿರ್ದೇಶಕ ಮಹೇಂದ್ರ, ಎ.ಎಸ್.ರಾಮಚಂದ್ರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ರಮೇಶ್, ಚನ್ನೇಗೌಡ, ರೇಣುಕಾ ಈಶ್ವರ್ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ